₹37,000 ಕೋಟಿ ಬಾಕಿ ಬಿಡುಗಡೆಗೆ ಮಾರ್ಚ್ 5ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಪ್ರತಿಭಟನೆ

Picture of Savistara

Savistara

Bureau Report

ರಾಜ್ಯ ಸರಕಾರ ಗುತ್ತಿಗೆದಾರರ ಒಟ್ಟು 37 ಸಾವಿರ ಕೋಟಿ ರೂ. ಬಿಲ್ ಬಾಕಿ ಇರಿಸಿದ್ದು, ಸಿಎಂ ಸಿದ್ದರಾಮಯ್ಯ ತಕ್ಷಣ ಅಧಿಕೃತ ಸಭೆ ಕರೆದು ಹಣ ಬಿಡುಗಡೆ ಮಾಡಬೇಕು.

ಇಲ್ಲದಿದ್ದಲ್ಲಿ ಮಾ.5ರಂದು ಕಾಮಗಾರಿ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ಎಚ್ಚರಿಸಿದ್ದಾರೆ.ಸರಕಾರ ಬಿಲ್ ಬಾಕಿ ಇಡುವ ಜತೆಗೆ ಹೊಸ ಕೆಲಸ ಕೂಡ ನೀಡುತ್ತಿಲ್ಲ. ಕೆಆರ್ ಡಿಎಲ್, ನಿರ್ಮಿತಿ ಕೇಂದ್ರಗಳು ಅಲ್ಲದೆ, ಹೊರ ರಾಜ್ಯಗಳ ಬೃಹತ್ ಗುತ್ತಿಗೆದಾರರಿಗೆ ಪ್ಯಾಕೇಜ್ ಕಾಮಗಾರಿ ನೀಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆಕ್ಷೇಪಿಸಿದರು. ಹಿಂದಿನ ಅಧ್ಯಕ್ಷ ಕೆಂಪಣ್ಣ ಅವರ ಕಾಲದಿಂದ ನಾವು ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಮೂರು ವರ್ಷದಿಂದ ಬಿಲ್‌ಗಾಗಿ ಕಾಯುತ್ತಿದ್ದೇವೆ. ಸಿಎಂ ಹಾಗೂ ಸಚಿವರಿಗೆ ಸಾಕಷ್ಟು ಬಾರಿ ಮನವಿ ನೀಡಿದ್ದೇವೆ. ಈ ಪತ್ರ ವ್ಯವಹಾರಗಳು ಹಾಗೂ ಬಾಕಿ ಮೊತ್ತ ಕುರಿತು 100 ಪುಟಗಳ ಮನವಿಯನ್ನು ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದೇವೆ. ಕೆಲವು ಸಚಿವರು ಸಭೆ ಕರೆದದ್ದು ಬಿಟ್ಟರೆ, ಸಿಎಂ ಯಾವಾಗ ಹಣ ಬಿಡುಗಡೆ ಮಾಡುತ್ತೇವೆ ಎಂಬುದನ್ನು ಹೇಳುತ್ತಿಲ್ಲ ಎಂದರು.

ಈಗ ಪರ್ಸೆಂಟೇಜ್ ಹೆಚ್ಚಾಗಿದೆ!

ಹಿಂದಿನ ಸರಕಾರಕ್ಕೆ ಶೇ.40 ಪರ್ಸೆಂಟೇಜ್ ಕೊಡಬೇಕು ಎಂದು ಹಿಂದಿನ ರಾಜ್ಯಾಧ್ಯಕ್ಷ ಕೆಂಪಣ್ಣ ಮಾಡಿದ್ದ ಆರೋಪವನ್ನು ನಮಗೆ ಸಾಬೀತು ಮಾಡಲಾಗದೆ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು. ಆದರೆ ಲಂಚ ಕೊಡುವ ಪರಿಸ್ಥಿತಿ ಬದಲಾಗಿಲ್ಲ. ಈಗ ಕೆಳಗಿನಿಂದ ಮೇಲಿನ ವರೆಗೂ ಎಲ್ಲ ಹಂತದಲ್ಲೂ ಲಂಚ ಕೊಡಬೇಕಾಗಿದೆ. ಈಗ ಪರ್ಸೆಂಟೇಜ್ ಮೊತ್ತ ಹಿಂದಿಗಿಂತ ಹೆಚ್ಚಾಗಿದ್ದು, ಎಷ್ಟು ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ಸಿಎಂ ಸಭೆ ಕರೆದರೆ, ಯಾರ್ಯಾರಿಗೆ ಎಷ್ಟು ಕೊಡುತ್ತೇವೆ ಅವರೆದುರಲ್ಲೇ ಬಹಿರಂಗಪಡಿಸುತ್ತೇವೆ ಆ‌ರ್.ಮಂಜುನಾಥ್ ಹೇಳಿದರು. ಎಂಬುದನ್ನು ಎಂದುಈಗಿನ ಸರಕಾರ ಶೇ. 80 ಪರ್ಸೆಂಟೇಜ್ ಪಡೆಯುತ್ತಿದೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳುತ್ತಿದ್ದಾರೆಂಬ ಪ್ರಶ್ನೆಗೆ, ಅವರು ರಾಜಕೀಯ ಮಾಡಿ ಬೇಳೆ ಬೇಯಿಸುವ ಬದಲು, ಬಾಕಿ ಮೊತ್ತ ಬಿಡುಗಡೆಗೆ ಒತ್ತಡ ತರಲಿ ಎಂದು ಅವರು ಸಲಹೆ ಮಾಡಿದರು.

ದಕ್ಷಿಣ ಕನ್ನಡದಲ್ಲಿ 1162 ಕೋಟಿ ಬಾಕಿ!

ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗೆದಾರರ 1162.27 ಕೋಟಿ ರೂ. ಬಿಲ್ ಬಾಕಿ ಇದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯ್ಕ ಹೇಳಿದರು. ಲೋಕೋಪಯೋಗಿ ಇಲಾಖೆಯ 300 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯ 647 ಕೋಟಿ ರೂ., ದ.ಕ ಜಿಪಂನ 6.27 ಕೋಟಿ ರೂ. ಮತ್ತು ಗ್ರಾಮೀಣ ನೀರು ಸರಬರಾಜಿನ 209 ಕೋಟಿ ರೂ. ಬಾಕಿ ಇದೆ. ಜಲಜೀವನ್ ಮಿಷನ್ ಯೋಜನೆಯ ಕೇಂದ್ರ ಸರಕಾರದ ಪಾಲು 1450 ಕೋಟಿ ರೂ. ಬಾಕಿ ಇದೆ. ಅದನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿಸಿ ಕೊಡಬೇಕು ಎಂದು ಮನವಿ ಮಾಡಿದರು.ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಚಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುನ್ನಾಸಿರ್ ಕೆ.ಕೆ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

[t4b-ticker]
error: Content is protected !!