ಆಮ್‌ಸ್ಟೆಲ್ವಿನ್: ಎಫ್‌ಐಎಚ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿಭಾರತ ಪುರುಷರ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 5-3 ಗೋಲುಗಳಿಂದ ಸೋಲಿಸಿದೆ. ಇದರೊಂದಿಗೆ ಪಾಕ್ ವಿರುದ್ದ ದಶಕದಿಂದ ಕಾಯ್ದುಕೊಂಡು ಬಂದಿರುವ ಅಜೇಯ ದಾಖಲೆಯನ್ನು ಹರ್ಮನ್ ಪ್ರೀತ್ ಸಿಂಗ್ ಪಡೆ ಮುಂದುವರಿಸಿದೆ.
ನೆದರ್‌ಲ್ಯಾಂಡ್ಸ್‌ನ ವ್ಯಾಗನರ್ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ವೇಜ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಫಾರ್ವಡ್್ರ ಆಟಗಾರ ಅಭಿಷೇಕ್ ಅವರು ತಲಾ ಎರಡು ಗೋಲು ಗಳಿಸಿ ಮಿಂಚಿದರು.ಈ ಸೋಲಿನೊಂದಿಗೆ ಪಾಕ್ ತಂಡವು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತಕ್ಕೆ 5ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ನಾಯಕ ಹರ್ಮನ್ ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿ ಮುನ್ನಡೆ ತಂದುಕೊಟ್ಟರು. ಬಳಿಕ 11ನೇ ನಿಮಿಷದಲ್ಲಿ ಅಭಿಷೇಕ್ ಗೋಲ್ ಬಾರಿಸಿದರು. ಈ ಮೂಲಕ ಭಾರತ 2-0ರಿಂದ ಅಂತರ ಕಾಯ್ದುಕೊಂಡಿತು. 21ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಎರಡನೇ ಗೋಲು ಗಳಿಸಿ ತಂಡದ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು.
ಇದರ ಬೆನ್ನಲ್ಲೇ ಚೇತರಿಸಿಕೊಂಡ ಪಾಕಿಸ್ತಾನದ ಹನ್ನಾನ್ ಶಾಹಿದ್ 22ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ಆದರೆ, 24ನೇ ನಿಮಿಷದಲ್ಲಿ ಅಭಿಷೇಕ್ ಮತ್ತೊಂದು ಅದ್ಭುತ ಗೋಲು ಬಾರಿಸಿ ಭಾರತಕ್ಕೆ 4-1ರ ಬಲ ತಂದುಕೊಟ್ಟರು. ಇದಾದ ಕೆಲವೇ ನಿಮಿಷಗಳಲ್ಲಿ ಪಾಕ್‌ನ ಸುಫಿಯಾನ್ ಖಾನ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು 2-4ಕ್ಕೆ ತಗ್ಗಿಸಿದರು.ಪಂದ್ಯದ ದ್ವಿತೀಯಾರ್ಧದಲ್ಲಿ ಹಾರ್ದಿಕ್ ಸಿಂಗ್ ಪೆನಾಲ್ಟಿ ಸ್ಟೋಕ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತದ ಖಾತೆಗೆ 5ನೇ ಗೋಲು ಸೇರಿಸಿದರು. 46ನೇ ನಿಮಿಷದಲ್ಲಿ ಪಾಕಿಸ್ತಾನದ ಶಾಹಿದ್ ತಮ್ಮ ಎರಡನೇ ಗೋಲು ಗಳಿಸಿದರೂ, ಪಂದ್ಯವನ್ನು ಭಾರತದ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಈ ಗೆಲುವಿನೊಂದಿಗೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಂದಿನ ಹಂತಕ್ಕೇರಿದವು. ಎಂಟು ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಪಾಕ್ ತಂಡಕ್ಕೆ ಈ ಸೋಲು ಭಾರಿ ಹಿನ್ನಡೆಯುಂಟು ಮಾಡಿದೆ.















































