ಮಳೆಗಾಲದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದ.ಕ ಜಿಲ್ಲೆಯಲ್ಲಿ ಶಾಲಾ – ಕಾಲೇಜುಗಳಿಗೆ ನೀಡಲಾದ ರಜೆಗಳನ್ನು ಸರಿದೂಗಿಸಲು ಸೆಪ್ಟೆಂಬರ್ ತಿಂಗಳ ಎರಡನೇ ವಾರದಿಂದ (ಸೆ.12) ಶನಿವಾರ ಪೂರ್ತಿ ತರಗತಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಮಾಡಿದ್ದಾರೆ.ವಿಪರೀತ ಮಳೆಗಾಲದ ಸಂದರ್ಭ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಮತ್ತು ಮೂಡಬಿದ್ರೆ ತಾಲೂಕುಗಳಿಗೆ ಒಟ್ಟು ಎಂಟು ಪೂರ್ಣ ದಿನಗಳು ಮತ್ತು ಒಂದು ಅರ್ಧ ದಿನದ ರಜೆಯನ್ನು ಘೋಷಿಸಲಾಗಿತ್ತು.
ಮತ್ತು ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ವಲಯಗಳಿಗೆ ಒಟ್ಟು ಒಂಭತ್ತು ಪೂರ್ಣ ದಿನಗಳ ರಜೆಗಳನ್ನು ಘೋಷಿಸಲಾಗಿತ್ತು.ಈ ರಜಾ ದಿನಗಳಲ್ಲಿ ಕೊರತೆಯಾಗಿರುವ ಬೋಧನಾ ಅವಧಿಗಳನ್ನು ಸರಿದೂಗಿಸಲು ಸೆಪ್ಟೆಂಬರ್ ತಿಂಗಳ ಎರಡನೇ ಶನಿವಾರದಿಂದ ಆರಂಭವಾಗಿ ಶನಿವಾರ ಅಪರಾಹ್ನ ಪೂರ್ಣ ತರಗತಿಗಳನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಇತರೆ ದಿನಗಳಲ್ಲಿ ಹೆಚ್ಚುವರಿಯಾಗಿ ಸಂಜೆ ಅವಧಿಯಲ್ಲಿ ಒಂದು ಬೋಧನಾ ಅವಧಿ ನಡೆಸಲು ಆದೇಶದಲ್ಲಿ ಸೂಚಿಸಲಾಗಿದೆ.
ಪ್ರತಿ ಶಾಲೆಯಲ್ಲಿ ಮಳೆ ರಜೆ ಲೆಕ್ಕಾಚಾರವನ್ನು ಇಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಅವಧಿಗಳನ್ನು ಲೆಕ್ಕಾಚಾರ ಮಾಡಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅವರೊಂದಿಗೆ ಚರ್ಚಿಸಿ ದಿನಗಳನ್ನು ನಿರ್ಧರಿಸಿ ವೇಳಾಪಟ್ಟಿಯಲ್ಲಿ ದಾಖಲಿಸಿ ಶೈಕ್ಷಣಿಕ ಮಾರ್ಗಸೂಚಿಯಂತೆ ಬೋಧನಾ ದಿನಗಳನ್ನು ಸರಿದೂಗಿಸಲು ಆದೇಶಿಸಲಾಗಿದೆ.















































