ನವದೆಹಲಿ: ಮಗುವಿಗೆ ಔಷಧ ನೀಡುವ ಸಣ್ಣ ವಿಚಾರ ದಂಪತಿಯ ನಡುವೆ ತೀವ್ರ ಕಲಹಕ್ಕೆ ಕಾರಣವಾಗಿ, ಕೊನೆಯಲ್ಲಿ ಪತ್ನಿ ಕಡೆಯವರ ಭೀಕರ ಹಲ್ಲೆಗೆ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.ಸಾಫ್ಟ್‌ವೇರ್ ಎಂಜಿನಿಯರ್ ವಿನಯ್ ಗುಪ್ತಾ (31) ಹತ್ಯೆಯಾದ ದುರ್ದೈವಿ. ಇವರು ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ವಾರ್ಷಿಕ ₹60 ಲಕ್ಷ ವೇತನದ ಉದ್ಯೋಗದಲ್ಲಿದ್ದರು.ಘಟನೆಯ ವಿವರ:ವಿನಯ್ ಗುಪ್ತಾ ಹಾಗೂ ರೇಖಾ ಅವರ ವಿವಾಹವಾಗಿ ಮೂರೂವರೆ ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಮಗುವಿಗೆ ಮಾತ್ರೆ ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಕೋಪಗೊಂಡ ರೇಖಾ, ತವರು ಮನೆಗೆ ತೆರಳಿ ವಿಷಯ ತಿಳಿಸಿದ್ದಾರೆ.
ಸ್ವಲ್ಪ ಸಮಯದ ಬಳಿಕ ರೇಖಾ ತಮ್ಮ ತಂದೆ, ಇಬ್ಬರು ಸಹೋದರರು, ಅತ್ತಿಗೆ ಹಾಗೂ ಚಿಕ್ಕಪ್ಪ ಸೇರಿದಂತೆ ಕುಟುಂಬದ ಸದಸ್ಯರನ್ನು ಕರೆದುಕೊಂಡು ಪತಿಯ ಮನೆಗೆ ಬಂದಿದ್ದಾರೆ. ಮನೆಗೆ ಬಂದ ಸಂಬಂಧಿಕರಿಗೆ ಕುಡಿಯಲು ನೀರು ತರಲು ವಿನಯ್ ಅವರ ತಾಯಿ ಅಡುಗೆ ಮನೆಗೆ ಹೋದ ಸಮಯದಲ್ಲೇ, ರೇಖಾ ಕಡೆಯವರೆಲ್ಲರೂ ಏಕಾಏಕಿ ವಿನಯ್ ಮೇಲೆ ಮುಗಿಬಿದ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ವಿನಯ್ ಅವರ ತಾಯಿ ಕೈಮುಗಿದು ಬೇಡಿಕೊಂಡರೂ ಬಿಡದೆ ಕ್ರೂರವಾಗಿ ಥಳಿಸಿದ್ದಾರೆ.ತೀವ್ರವಾಗಿ ಗಾಯಗೊಂಡ ವಿನಯ್ ಅವರನ್ನು ನೆರೆಹೊರೆಯವರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ, ತಪಾಸಣೆ ನಡೆಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಚುರುಕುಗೊಳಿಸಿದ್ದಾರೆ.













































