ಮಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ನಿರತರಾಗಿರುವ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಅಥವಾ ಕಿರುಕುಳ ನೀಡುವ ಕೆಲಸಕ್ಕೆ ಕೈಹಾಕಿದರೆ ಬಿಜೆಪಿ ಸುಮ್ಮನಿರಲ್ಲ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಶುದ್ದೀಕರಣವು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಾಗಿದ್ದು, ಈ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಕಾರ್ಯಕರ್ತರನ್ನು ಬೆದರಿಸುವ ಯತ್ನಗಳು ನಡೆದರೆ ಅದನ್ನು ಗಂಭೀರವಾಗಿ ಎದುರಿಸಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಸಾಕ್ಷ್ಯಾಧಾರ ನೀಡಲಿ:ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪ ಸಂಪೂರ್ಣ ನಿರಾಧಾರ. ಗೊಂದಲ ಸೃಷ್ಟಿಸುವ ಬದಲು, ಅಕ್ರಮವಾಗಿ ಮತ ರದ್ದಾಗಿದೆ ಎನ್ನಲಾದ ಒಬ್ಬನೇ ಒಬ್ಬ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ. ಕೇವಲ ಸುಳ್ಳು ಪ್ರಚಾರ ಮಾಡುವ ಬದಲು ತಮ್ಮ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಎಂದು ಕ್ಯಾ.ಚೌಟ ಸವಾಲು ಹಾಕಿದರು.ಕಾಂಗ್ರೆಸ್ ಗೆ ಸಂವಿಧಾನ ಅಥವಾ ಕಾನೂನಿನ ಮೇಲೆ ಯಾವುದೇ ಕನಿಷ್ಠ ಗೌರವ ಹಾಗೂ ನಂಬಿಕೆ ಇಲ್ಲ. ಚುನಾವಣಾ ಆಯೋಗದ ಕುರಿತು ಸಂಶಯ ಮೂಡಿಸಿ, ಸಮಾಜದಲ್ಲಿ ಗೊಂದಲ ಹಾಗೂ ಅರಾಜಕತೆ ಸೃಷ್ಟಿಸುವುದೇ ಕಾಂಗ್ರೆಸ್‌ನ ಮುಖ್ಯ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಎಂಬುದು ಹೊಸ ಪ್ರಕ್ರಿಯೆಯಲ್ಲ. ಇದು ನಿಯಮಿತವಾಗಿ ನಡೆಯುವ ಸಂವಿಧಾನಾತ್ಮಕ ಪ್ರಕ್ರಿಯೆ. ಮತದಾರರ ಪಟ್ಟಿಯಲ್ಲಿರುವ ಮೃತಪಟ್ಟವರ ಹೆಸರುಗಳನ್ನು ತೆರವುಗೊಳಿಸುವುದು, ಸ್ಥಳಾಂತರಗೊಂಡವರ ವೋಟ್‌ಗಳನ್ನು ಸರಿಪಡಿಸುವುದು, ಡಬಲ್ ಎಂಟ್ರಿ ಹೆಸರುಗಳನ್ನು ತೆಗೆದುಹಾಕಿ ಪರಿಶುದ್ಧ ಮತದಾರರ ಪಟ್ಟಿಯನ್ನು ತಯಾರಿಸುವುದು ಇದರ ಮುಖ್ಯ ಉದ್ದೇಶ. ಈ ಪ್ರಕ್ರಿಯೆಗೆ ಸಹಕರಿಸಲು ಚುನಾವಣಾ ಆಯೋಗವು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಬಿಎಲ್‌ಎ-೨ ಪ್ರತಿನಿಧಿಗಳನ್ನು ನೇಮಿಸಲು ಅವಕಾಶ ನೀಡುತ್ತದೆ. ಆದರೆ, ಈ ಕಾನೂನಾತ್ಮಕ ಪ್ರಕ್ರಿಯೆಯಲ್ಲೂ ಕಾಂಗ್ರೆಸ್ ಅಡೆತಡೆ ಉಂಟುಮಾಡುತ್ತಿದ್ದು, ರಾಜ್ಯದ ಡಿ.ಕೆ. ಶಿವಕುಮಾರ್ ಸರ್ಕಾರವು ಬಿಎಲ್‌ಎ-೨
ಕಾರ್ಯಕರ್ತರನ್ನು ಭಯಪಡಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಫಾರಂ-7ರ ಬಗ್ಗೆ ಅಪಪ್ರಚಾರ:ಫಾರಂ-7 ಎಂಬುದು ಕೇವಲ ಆಕ್ಷೇಪಣೆ ಸಲ್ಲಿಸುವ ವ್ಯವಸ್ಥೆಯಾಗಿದೆಯೇ ಹೊರತು, ಅರ್ಜಿ ಸಲ್ಲಿಸಿದ ತಕ್ಷಣವೇ ಹೆಸರು ಡಿಲೀಟ್ ಆಗುವುದಿಲ್ಲ. ಆಕ್ಷೇಪಣೆ ಸಲ್ಲಿಕೆಯಾದ ನಂತರ ಇಆರ್‌ಒ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಯಾವುದೇ ಮತದಾರರ ಹೆಸರು ಬಿಟ್ಟುಹೋಗಿದ್ದರೆ, ಫಾರಂ-6 ಮೂಲಕ ಪುನಃ ಹೆಸರು ಸೇರಿಸಲು ಅವಕಾಶವಿದೆ. ರಾಜ್ಯದ ಕರಡು ಮತದಾರರ ಪಟ್ಟಿಯ ಅಂಕಿ- ಅಂಶಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ. ಕರಡು ಪಟ್ಟಿ ಪ್ರಕಟವಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ಹೊಸ ಮತದಾರರ ಸೇರ್ಪಡೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಜಿಲ್ಲಾ ವಕ್ತಾರ ರಾಜಗೋಪಾಲ್ ರೈ, ಮಾಧ್ಯಮ ಪ್ರಮುಖ ವಸಂತ ಜೆ. ಪೂಜಾರಿ ಹಾಗೂ ಜಿಲ್ಲಾ ವಕ್ತಾರ ಜೀವನ್ ಕುಮಾರ್ ತೊಕ್ಕೊಟ್ಟು, ಸಂಜಯ ಪ್ರಭು ಇದ್ದರು.












































