ಸಚಿವರ ‘ಹನಿ ಟ್ರ್ಯಾಪ್’ಗೆ ಯತ್ನ | ತಿಂಗಳಿಂದ ಗುಸು ಗುಸು: ಸದನದಲ್ಲೇ ಸ್ಫೋಟ!

Picture of Savistara

Savistara

Bureau Report

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಕೆ.ಎನ್‌. ರಾಜಣ್ಣ ಅವರನ್ನು ಪಕ್ಷದ ಪ್ರತಿಸ್ಪರ್ಧಿ ಗುಂಪಿನ ಪ್ರಮುಖರು ‘ಹನಿ ಟ್ರ್ಯಾಪ್’ಗೆ ಕೆಡವಲು ಯತ್ನಿಸಿದ್ದಾರೆ ಎಂಬ ಸುದ್ದಿ ತಿಂಗಳಿಂದ ಗುಸು ಗುಸು ಚರ್ಚೆಯಲ್ಲಿತ್ತು. ಗುರುವಾರ ವಿಧಾನ ಸಭೆಯೊಳಗೇ ಸ್ಫೋಟಿಸಿತು.

ರಾಜಣ್ಣ ಅವರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಲು ಯತ್ನಿಸಿದ ತಂಡ ಅವರ ಬೆಂಬಲಿಗರಿಗೆ ಸಿಕ್ಕಿಬಿದ್ದಿದೆ ಎಂಬ ಮಾಹಿತಿ ಫೆಬ್ರುವರಿ 3ನೇ ವಾರ ಹೊರಬಿದ್ದಿತ್ತು. ಖಚಿತವಾಗದೇ ಚರ್ಚೆಯಲ್ಲೇ ಅಂತ್ಯವಾಗಿತ್ತು.ಮಾಹಿತಿ ಪ್ರಕಾರ, ‘ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದ ಸಚಿವರನ್ನು ‘ಹನಿ ಟ್ರ್ಯಾಪ್’ಗೆ ಕೆಡವಿ ಸಿಲುಕಿಸಲು ‘ಕೈ’ ಪಾಳಯದ ಎದುರಾಳಿ ಗುಂಪಿನ ‘ಪ್ರಭಾವಿ’ ಒಬ್ಬರು ತಂತ್ರ ರೂಪಿಸಿದ್ದರು. ಅದೇ ಪಕ್ಷದ ಪ್ರಭಾವಿ ಯುವ ಮುಖಂಡನ ನೇತೃತ್ವದಲ್ಲೇ ‘ಹನಿ ಟ್ರ್ಯಾಪ್’ ತಂಡವನ್ನು ಸಜ್ಜುಗೊಳಿಸಿ ಕಾರ್ಯಾಚರಣೆಗೆ ಇಳಿಸಲಾಗಿತ್ತು’.’ಯುವ ಮುಖಂಡನ ನೇತೃತ್ವದಲ್ಲೇ ಯುವತಿಯರನ್ನು ಸಚಿವರ ಕಚೇರಿಗೂ ಕಳುಹಿಸಲಾಗಿತ್ತು. ಎರಡು ಬಾರಿ ಸಚಿವರನ್ನು ಭೇಟಿಮಾಡಲಾಗಿತ್ತು. ಭೇಟಿಯನ್ನು ರಹಸ್ಯವಾಗಿ ಸೆರೆಹಿಡಿದು, ಸಂಗ್ರಹಿಸಲು ‘ಹನಿ ಟ್ರ್ಯಾಪ್’ ಕಾರ್ಯಾಚರಣೆಯ ಅನುಭವಿಗಳ ಕೆಲವರ ತಂಡವನ್ನು ನಿಯೋಜಿಸಲಾಗಿತ್ತು’ ಎಂಬ ವಿವರ ಸದ್ದು ಮಾಡಿತ್ತು.

ತಮ್ಮನ್ನು ‘ಹನಿ ಟ್ರ್ಯಾಪ್’ಗೆ ಕೆಡವಲು ಯತ್ನಿಸುತ್ತಿರುವ ಸುಳಿವು ಸಚಿವರಿಗೆ ಫೆಬ್ರುವರಿ ಮೊದಲ ವಾರದ ಹೊತ್ತಿನಲ್ಲೇ ಲಭಿಸಿತ್ತು. ಮೂರನೇ ಭೇಟಿ ವೇಳೆ ಸಚಿವರ ಬೆಂಬಲಿಗರು ಕೆಲವರನ್ನು ಹಿಡಿದು ‘ವಿಚಾರಣೆ’ ನಡೆಸಿದ್ದರು. ‘ಪ್ರಭಾವಿ’ಗಳ ಆಪ್ತ ವಲಯದ ‘ಯುವ ಮುಖಂಡ’ನೇ ಕಾರ್ಯಾಚರಣೆಗೆ ಇಳಿಸಿರುವುದು ಎಂಬ ಮಾಹಿತಿ ಸಿಕ್ಕಿತ್ತು. ಕಾರ್ಯಪ್ರವೃತ್ತರಾದ ಸಚಿವರ ಬೆಂಬಲಿಗರ ಪಡೆ ‘ಯುವ ಮುಖಂಡ’ನನ್ನೂ ಎಳೆತಂದು ‘ವಿಚಾರಣೆ’ ನಡೆಸಿ ತಪ್ರೊಪ್ಪಿಗೆ ಹೇಳಿಕೆ ಚಿತ್ರೀಕರಿಸಿಕೊಂಡಿತ್ತು ಎಂದು ಘಟನಾವಳಿಯನ್ನು ಕೆಲವರು ಬಣ್ಣಿಸಿದ್ದರು.’ಸಹಕಾರ ಸಚಿವರನ್ನು ‘ಹನಿ ಟ್ರ್ಯಾಪ್’ಗೆ ಕೆಡವಲು ವಿರೋಧಿಗಳು ಯತ್ನಿಸಿದ್ದಾರೆ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ವಿಧಾನಸಭೆಯಲ್ಲೇ ಹೇಳಿಕೆ ನೀಡಿ ರಾಜ್ಯ ರಾಜಕಾರಣದ ಕೊಳಕ್ಕೆ ಕಲ್ಲು ಎಸೆದಿದ್ದಾರೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರೂ, ಯತ್ನಾಳರ ಹೇಳಿಕೆ ದೃಢಪಡಿಸಿ, ವಿವರ ಹಂಚಿಕೊಂಡಿದ್ದಾರೆ. ತಿಂಗಳ ಹಿಂದೆ ಹರಿದಾಡಿದ್ದ ಗುಸು-ಗುಸು ಸುದ್ದಿಗೂ ಸಚಿವರ ಮಾತಿಗೂ ಸಾಮ್ಯತೆಗಳು ಕಾಣಿಸುತ್ತಿವೆ.

ಅಜ್ಜಯ್ಯನ ಭಾವಚಿತ್ರ ತೋರಿಸಿದ ಮುನಿರತ್ನ’

ನಾನು ಅತ್ಯಾಚಾರ ಮಾಡಿಲ್ಲ ಎಂದು ಆಣೆ ಮಾಡುತ್ತೇನೆ. ಸುಳ್ಳು ದೂರು ಕೊಡಿಸಿದವರು ಪ್ರಮಾಣ ಮಾಡುತ್ತಾರೆಯೆ’ ಎಂದು ಪ್ರಶ್ನಿಸಿದ ಬಿಜೆಪಿಯ ಮುನಿರತ್ನ, ತಾನು ತಂದಿದ್ದ ಪ್ರತ್ಯಂಗಿರಾ, ಶನಿ ದೇವರು, ಅಜ್ಜಯ್ಯನ ಭಾವಚಿತ್ರ ಪ್ರದರ್ಶಿಸಿದರು.ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ನಾನು ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ. ಹೀಗೆಲ್ಲ ಜೀವನ ಹಾಳು ಮಾಡಬೇಕೇ? ಯಾರನ್ನೋ ಕರೆದುಕೊಂಡು ಬಂದು ರಾಮನಗರದಲ್ಲಿ ದೂರು ಕೊಡಿಸಿದ್ದಾರೆ. ಐದು ವರ್ಷದ ಹಿಂದಿನ ಕೇಸ್ ಅದು. ನಾನು ಮಾಡಿದ ತಪ್ಪೇನು? ಸುಳ್ಳು ಕೇಸ್ ಹಾಕಿಸಿ ಜೀವನ ಹಾಳು ಮಾಡುತ್ತಿದ್ದಾರೆ. ಇವರಿಗೂ ಮಕ್ಕಳು ಮರಿ ಇಲ್ಲವೇ? ವಂಶ ಇಲ್ಲವೇ’ ಎಂದು ಆಕ್ರೋಶ ಹೊರಹಾಕಿದರು.’ನಮ್ಮ ಜೀವನ ಹಾಳು ಮಾಡಲು ಏನು ಮಾಡಬೇಕು ಅದನ್ನು ಮಾಡಿದ್ದಾರೆ. ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಏನು ಅಂತ ಉತ್ತರ ಕೊಡಲಿ. ಅವರಿಗೆ ಹೇಗೆ ಮುಖ ತೋರಿಸಲಿ? ನಾನು ಮಾಡಿದ ತಪ್ಪು ಏನು? ಎಚ್‌.ಡಿ. ರೇವಣ್ಣನ ಮನೆ ಹಾಳು ಮಾಡಿದರು, ರಮೇಶ ಜಾರಕಿಹೊಳಿ ಮನೆ ಹಾಳು ಮಾಡಿದರು. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು. ನಿಮಗೆ ಕೈ ಮುಗಿದು ಕೇಳುತ್ತೇನೆ, ನ್ಯಾಯ ಕೊಡಿಸಿ’ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಲು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಜಾತಿ ನಿಂದನೆ ಕೇಸ್ ವಾಪಸ್ ಪಡೆಯುತ್ತೇನೆ ಎಂದೂ ಹೇಳಿದ್ದರು. ನನಗೆ ಮೊಟ್ಟೆ ಹೊಡೆಯಲು ದರ ನಿಗದಿಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣೆಯ ಬಳಿಕ ಇದೆಲ್ಲವನ್ನೂ ಅವರು ಮಾಡಿಸಿದ್ದಾರೆ’ ಎಂದರು.`ಗನ್ ಮ್ಯಾನ್ ಒದಗಿಸುವಂತೆ ಕೇಂದ್ರ ಗೃಹ ಇಲಾಖೆ, ಮಾನವ ಹಕ್ಕುಗಳು, ನಾನು ಸುಪ್ರೀಂ ಕೋರ್ಟ್ ಹೀಗೆ ಎಲ್ಲ ಕಡೆ ಹೋಗಿದ್ದೇನೆ. ಚುನಾವಣೆಯಲ್ಲಿ ಕುಸುಮಾ ಸೋತ ಮೇಲೆ ಈ ರೀತಿ ಆಗಿದೆ’ ಎಂದರು.

ಅಶೋಕ-ಸುನಿಲ್ ಕುಮಾರ್ ಮೊಗಸಾಲೆ ಜಗಳ

ವಿಧಾನಸಭೆಯಲ್ಲಿ ರಾಜಣ್ಣ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದಾಗ ವಿಪಕ್ಷ ನಾಯಕ ಆ‌ರ್. ಅಶೋಕ ಮೌನ ವಹಿಸಿದ್ದು ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಮತ್ತು ಇತರ ಶಾಸಕರನ್ನು ಕೆರಳಿಸಿತು.ಮೊಗಸಾಲೆಯಲ್ಲಿ ಚಹಾ ಸೇವಿಸುವ ಸಂದರ್ಭದಲ್ಲಿ ಸುನಿಲ್‌ಕುಮಾ‌ರ್ ಅವರು ಈ ವಿಷಯವನ್ನು ಅಶೋಕ ಬಳಿ ನೇರವಾಗಿ ಪ್ರಸ್ತಾಪಿಸಿದರು.’ಅಲ್ಲರೀ ಅಶೋಕ್‌ ಅವರೇ.. ನಿಮಗೆ ನ್ಯಾಯಾಂಗ ತನಿಖೆಗೆ ಕೊಡಿ ಎಂದು ಹೇಳಲು ಆಗುವುದಿಲ್ಲವೇ? ನಾನು ಎದ್ದು ನಿಂತು ಮಾತನಾಡ್ತಾ ಇದ್ದೆ. ನೀವು ಬಾಯಿ ಬಿಟ್ಟು ತನಿಖೆಗೆ ಕೇಳೋಕೆ ಆಗಲಿಲ್ಲವೇ’ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು.ಅದಕ್ಕೆ ಅಶೋಕ, ‘ಏಯ್ ಸುನಿಲ್.. ನಾನೇ ಮೊದಲಿಗೆ ತನಿಖೆ ಕೊಡಿ ಎಂದು ಹೇಳಿದ್ದು’ ಎಂದರು.’ಎಲ್ಲಿ, ನೀವು ಮಾತನಾಡಿದ್ದು. ನಾನು ಪ್ರಸ್ತಾಪ ಮಾಡಿದ ಮೇಲೆ ನೀವು ಎದ್ದು ನಿಂತಿದ್ದು ಅಲ್ವ. ನಾನು ಎದ್ದು ನಿಲ್ಲುವರೆಗೆ ನೀವು ಕಾಯಬೇಕೇ’ ಎಂದು ಸುನಿಲ್ ಪ್ರಶ್ನಿಸಿದರು.

ಅದಕ್ಕೆ ಅಶೋಕ, ‘ಏಯ್ ಸುನಿಲ್.. ನಾನೇ ಮೊದಲಿಗೆ ತನಿಖೆ ಕೊಡಿ ಎಂದು ಹೇಳಿದ್ದು’ ಎಂದರು.’ಎಲ್ಲಿ, ನೀವು ಮಾತನಾಡಿದ್ದು. ನಾನು ಪ್ರಸ್ತಾಪ ಮಾಡಿದ ಮೇಲೆ ನೀವು ಎದ್ದು ನಿಂತಿದ್ದು ಅಲ್ವ. ನಾನು ಎದ್ದು ನಿಲ್ಲುವರೆಗೆ ನೀವು ಕಾಯಬೇಕೇ’ ಎಂದು ಸುನಿಲ್ ಪ್ರಶ್ನಿಸಿದರು.ಅದಕ್ಕೆ ಅಶೋಕ, ‘ಇಲ್ಲ.. ನಾನೇ ಹೇಳಿದ್ದು’ ಎಂದರು. ‘ನಾನೇ ನಿಮಗೆ ಹೇಳಿಕೊಟ್ಟಿದ್ದು. ಆಮೇಲೆ ನೀವು ಹೇಳಿದ್ದು’ ಎಂದು ಸುನಿಲ್ ಮತ್ತೆ ಹೇಳಿದಾಗ, ‘ಇಲ್ಲ.. ಇಲ್ಲ. ನಾನೇ ಹೇಳಿದೆ’ ಎಂದರು. ಶಾಸಕ ಸುರೇಶ್ ಗೌಡ ಮತ್ತು ಇತರ ಶಾಸಕರು ಸುನಿಲ್ ಅವರಿಗೆ ಧ್ವನಿಗೂಡಿಸಿ, ‘ವಿರೋಧ ಪಕ್ಷದ ನಾಯಕರಾಗಿ ನಿಮ್ಮ ಜವಾಬ್ದಾರಿ ಹೆಚ್ಚು’ ಎಂದರು.

[t4b-ticker]
error: Content is protected !!