ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ 2 ದಿನಗಳಿಂದ ಬೆಂಗಳೂರು ಕರ್ನಾಟಕ ವೃತ್ತದ ಬಿ.ಎಸ್.ಎನ್.ಎಲ್. ಮುಖ್ಯ ಜನರಲ್ ಮ್ಯಾನೇಜರ್ (ಟೆಲಿಕಾಂ) ಆದ ಶ್ರೀಮತಿ ಎನ್ ಸುಜಾತರವರು ಕ್ಷೇತ್ರಕ್ಕೆ ಮಂಜೂರಾಗಿರುವ ಬಿ.ಎಸ್.ಎನ್.ಎಲ್ ಟವರ್ ಗಳ ನಿರ್ಮಾಣಕ್ಕೆ ಜಾಗ ಮಂಜೂರಾತಿ. ಮಂಜೂರಾದ ಜಾಗಗಳಲ್ಲಿ ಟವರ್ ಗಳ ನಿರ್ಮಾಣ ಪ್ರಗತಿ ಹಾಗೂ ಕಾಮಗಾರಿಗಳ ವಿವಿಧ ಹಂತಗಳ ಕುರಿತು ಸ್ಥಳ ಪರಿಶೀಲನೆ ನಡೆಸಿರುತ್ತಾರೆ.ಇಂದು ಶಿವಮೊಗ್ಗ ಲೋಕಸಭಾ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ರವರ ಅಧ್ಯಕ್ಷತೆಯಲ್ಲಿ ಸಾಗರ ರಸ್ತೆಯಲ್ಲಿರುವ ಬಿ.ಎಸ್.ಎನ್.ಎಲ್ ಕಛೇರಿಯಲ್ಲಿ ಕರ್ನಾಟಕ ವೃತ್ತದ ಬಿ.ಎಸ್.ಎನ್.ಎಲ್ ಮುಖ್ಯ ಜನರಲ್ ಮ್ಯಾನೇಜರ್-ಟೆಲಿಕಾಂ, (ಶ್ರೀಮತಿ ಸುಜಾತ ಎನ್) ನಿಗಮದ ಜನರಲ್ ಮ್ಯಾನೇಜರ್ (ಶ್ರೀ ಬಿ.ಕೆ ಸಿಕ್ಕಾ) ಡೆಪ್ಯೂಟಿ ಜನರಲ್ ಮ್ಯಾನೇಜರ್. (ಶ್ರೀ ಕೃಷ್ಣ ಮೊಗೇರ ಮತ್ತು ಶ್ರೀ ವೆಂಕಟೇಶ್) ಸಹಾಯಕ ಜನರಲ್ ಮ್ಯಾನೇಜರ್, ಜ್ಯೂನಿಯರ್ ಟೆಲಿಕಾಂ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಪ್ರತಿಯೊಂದು ಟವರ್ ಗಳ ಬಗ್ಗೆ ಪ್ರಗತಿ ಪರಿಶೀಲನೆಯನ್ನು ನಡೆಸಿದರು.
ಜಿಲ್ಲೆಗೆ ಮಂಜೂರಾಗಿರುವ 4ಜಿ ನ್ಯಾಚುರೇಶನ್ ನ 134 ಪ್ರಸ್ತಾಪಿತ ಸ್ಥಳಗಳಲ್ಲಿ 49 ಟವರ್ ಗಳ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕ ಸೇವೆಗೆ ಲಭ್ಯವಾಗಿರುವುದಾಗಿ, 6 ಕಾಮಗಾರಿಗಳು ಪ್ರಗತಿ ಅಂತಿಮ ಹಂತದಲ್ಲಿರುವುದಾಗಿ, ಉಳಿದ ಕಾಮಗಾರಿಗಳ ಪ್ರಗತಿ ವಿವಿಧ ಹಂತದಲ್ಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಅರಣ್ಯ ಪ್ರದೇಶದ 60 ಕಡೆಗಳಲ್ಲಿ ಜಾಗ ಮಂಜೂರಾತಿ Stage-1 ಮತ್ತು 2 ರಲ್ಲಿ ಮಂಜೂರಾತಿ ಬಾಕಿ ಇದ್ದು, ತಕ್ಷಣವೇ ಮಂಜೂರಾತಿ ಪಡೆದು ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಶಿವಮೊಗ್ಗ ಜಿಲ್ಲೆಯು ಮಲೆನಾಡು ಪ್ರದೇಶವಾಗಿದ್ದು ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಸಾಕಷ್ಟು ನೆಟ್ ವರ್ಕ್ ಸಮಸ್ಯೆ ಇದ್ದು, ಸಾರ್ವಜನಿಕರುಗಳಿಂದ ವ್ಯಾಪಕ ದೂರುಗಳು ಬರುತ್ತಿದ್ದು. ಅಧಿಕಾರಿಗಳು ಸ್ಪಂದಿಸದಿರುವ ಬಗ್ಗೆ ಸಭೆಯಲ್ಲಿ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕ್ಷೇತ್ರದಲ್ಲಿ ಬಿ.ಎಸ್.ಎನ್.ಎಲ್ ಟವರ್ ಗಳಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣವೇ ಸರಿಪಡಿಸಲು ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಿದರು. ಹೊಸನಗರ ತಾಲ್ಲೂಕಿನ ಬ್ರಾಹ್ಮಣವಾಡಿ, ಕೊಳವಾಡಿ, ಗಿಣಿಕಲ್ಲು, ಮಣಸಟ್ಟೆ, ಮತ್ತಿಕ್ಕೆ, ನೀಲಕಂಠನಗೋಟ. ಪಿ. ಕಲ್ಲುಕೊಪ್ಪ ಗ್ರಾಮಗಳಲ್ಲಿ ಬಹಳಷ್ಟು ವರ್ಷಗಳಿಂದ ಜಾಗ ಮಂಜೂರಾತಿ ಬಾಕಿ ಇದ್ದು. ತಕ್ಷಣವೇ ಮಂಜೂರಾತಿ ಪಡೆಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 28 ಟವರ್ ಗಳು ಮಂಜೂರಾಗಿದ್ದು, ಇದರಲ್ಲಿ 22 ಟವರ್ ಗಳ ಕಾಮಗಾರಿ ಸಂಪೂರ್ಣವಾಗಿ ಮುಗಿದು. ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. 6 ಟವರ್. ಗಳನ್ನು ಆದಷ್ಟು ಬೇಗನೆ ಮುಗಿಸಿಕೊಡಲು ಮುಖ್ಯ ಜನರಲ್ ಮ್ಯಾನೇಜರ್ (ಟೆಲಿಕಾಂ) ಇವರಿಗೆ ಸೂಚಿಸಿದರು.
ಕೆಟಗರಿ-5 ಮತ್ತು 6 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೊಸನಗರ ತಾಲ್ಲೂಕಿಗೆ 7. ಸಾಗರ ತಾಲ್ಲೂಕಿಗೆ 7, ಶಿಕಾರಿಪುರ ತಾಲ್ಲೂಕಿಗೆ-2, ಸೊರಬ ತಾಲ್ಲೂಕಿಗೆ 7. ತೀರ್ಥಹಳ್ಳಿ ತಾಲ್ಲೂಕಿಗೆ-8 ಬಿ.ಎಸ್.ಎನ್.ಎಲ್ ಟವರ್ ಗಳು ಮಂಜೂರಾಗಿದ್ದು, ಟವರ್ ಗಳನ್ನು ನಿರ್ಮಾಣ ಮಾಡಲು ಆದಷ್ಟು ಬೇಗ ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲ್ಲೂಕಿಗೆ ಹೋಗುವ ಹೆದ್ದಾರಿ ರಸ್ತೆಗಳಲ್ಲಿ (ಅರಣ್ಯ ಪ್ರದೇಶದಲ್ಲಿ) ಏನಾದರೂ ಅನಾಹುತಗಳು ಸಂಭವಿಸಿದ್ದಲ್ಲಿ ಸಂಪರ್ಕಿಸಲು ನೆಟ್ ವರ್ಕ್ ಸಮಸ್ಯೆ ಇದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.













































