ಬಿಜೆಪಿ ವಿರೋಧದ ಮಧ್ಯೆ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ4ರ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರ

Picture of Savistara

Savistara

Bureau Report

ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ಕಲ್ಪಿಸುವ ಕೆಟಿಪಿಪಿ ತಿದ್ದುಪಡಿ ಮಸೂದೆಯು ಬಿಜೆಪಿ ಪ್ರತಿಭಟನೆ, ಧರಣಿಯ ಮಧ್ಯೆಯೇ ವಿಧಾನಸಭೆ ಹಾಗೂ ವಿಧಾನಪರಿಷತ್​​ ಎರಡರಲ್ಲೂ ಅಂಗೀಕಾರಗೊಂಡಿತು.

ಬೆಂಗಳೂರು: ಅಲ್ಪಸಂಖ್ಯಾತರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ (ತಿದ್ದುಪಡಿ) ವಿಧೇಯಕ – 2025 ಬಿಜೆಪಿ ಸದಸ್ಯರ ವಿರೋಧಗಳ ಮಧ್ಯೆಯೇ ವಿಧಾನಸಭೆಯಲ್ಲಿ ಅಂಗೀಕೃತವಾಯಿತು.ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ಬಳಿಕ ಕಲಾಪ ಪುನಾರಂಭವಾಗುತ್ತಿದ್ದ ಹಾಗೆಯೇ, ಉಳಿದ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಈ ಮಧ್ಯೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ (ತಿದ್ದುಪಡಿ) ವಿಧೇಯಕ – 2025ನ್ನು ಪರ್ಯಾಲೋಚಿಸಲಾಯಿತು. ಬಿಜೆಪಿ ಸದಸ್ಯರ ಪ್ರತಿಭಟನೆ, ಘೋಷಣೆಗಳ ಮಧ್ಯೆ ಅಲ್ಪಸಂಖ್ಯಾತರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡುವ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಯಿತು.

ಮೀಸಲಾತಿ ವಿವರ: ಈ ತಿದ್ದುಪಡಿ ವಿಧೇಯಕದಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಕಾಮಗಾರಿಗಳಲ್ಲಿ ಎರಡು ಕೋಟಿ ರೂ. ವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ ಮತ್ತು 2ಬಿ ಗುತ್ತಿಗೆದಾರರಿಗೆ ಹಾಗೂ ಸರ್ಕಾರದ ವಿವಿಧ ಇಲಾಖೆ, ನಿಗಮ ಹಾಗೂ ಸಂಸ್ಥೆಗಳಲ್ಲಿ ಖರೀದಿಸುವ ಸರಕು ಮತ್ತು ಸೇವೆಗಳಲ್ಲಿ ಒಂದು ಕೋಟಿ ರೂ. ವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ ಮತ್ತು 2ಬಿ ಸರಬರಾಜುದಾರರಿಗೆ ಮೀಸಲಾತಿ ಒದಗಿಸುವ ಕುರಿತು ಕೆಟಿಪಿಪಿ ಕಾಯ್ದೆ 1999ಕ್ಕೆ ತಿದ್ದುಪಡಿ ತರಲಾಗಿದೆ.ಅದರಂತೆ 2025-26 ಸಾಲಿನಲ್ಲಿ ಸಿಎಂ ಬಜೆಟ್​​ನಲ್ಲಿ ಘೋಷಿಸಿದಂತೆ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಘೋಷಣೆಯನ್ನು ಅನುಷ್ಠಾನಗೊಳಿಸಲು ಅನುವಾಗುವಂತೆ ಕೆಟಿಪಿಪಿ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಅಧಿವೇಶನದ ಕೊನೆಯ ದಿನ ಅಂಗೀಕಾರ ನೀಡಲಾಯಿತು.

ಮೇಲ್ಮನೆಯಲ್ಲೂ ವಿಧೇಯಕ ಅಂಗೀಕಾರ: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ (ತಿದ್ದುಪಡಿ) ವಿಧೇಯಕ – 2025 ವಿಧಾನಪರಿಷತ್ತಿನಲ್ಲೂ ತೀವ್ರ ವಿರೋಧದ ನಡುವೆಯೇ ಅಂಗೀಕಾರಗೊಂಡಿತು.ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ತಿದ್ದುಪಡಿ ವಿಧೇಯಕವನ್ನು ಪರಿಷತ್​​ನಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಂಡಿಸಿದರು. ಅಲ್ಪಸಂಖ್ಯಾತರನ್ನ ಆರ್ಥಿಕವಾಗಿ ಮೇಲೆತ್ತಲು ತಿದ್ದುಪಡಿಗೆ ವಿಧೇಯಕ ತರಲಾಗಿದೆ. ಈಗಾಗಲೇ ಪರಿಶಿಷ್ಟರಿಗೆ, ಒಬಿಸಿ ವರ್ಗದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಲಾಗಿದ್ದು, ಪ್ರವರ್ಗ 2 ಬಿ ನಲ್ಲಿ ಬರುವ‌ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಲು ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಕಾಯ್ದೆಗೆ ಅಂಕಿತ ರೂಪ ನೀಡುವಂತೆ ಮನವಿ ಮಾಡಿದರು.

ಛಲವಾದಿ ನಾರಾಯಣಸ್ವಾಮಿ ವಿರೋಧ: ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಧರ್ಮಾಧಾರಿತ ಆಧಾರದ ಮೇರೆಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುತ್ತಿರುವುದಕ್ಕೆ ವಿರೋಧವಿದೆ. ನಿರ್ದಿಷ್ಟ ಸಮುದಾಯ ಗುರಿಯಾಗಿಸಿ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ಸರ್ಕಾರ ನಡೆಯನ್ನು ಖಂಡಿಸುತ್ತೇನೆ. ಅಲ್ಪಸಂಖ್ಯಾತರ ವರ್ಗಗಳಲ್ಲಿ ಜೈನ, ಬೌದ್ಧ, ಪಾರ್ಸಿ ಸೇರಿದಂತೆ ಇನ್ನಿತರ ಧರ್ಮಗಳು ಬರಲಿವೆ. ಅವರಿಗೆ ಮೀಸಲಾತಿ ನೀಡದೆ 2ಬಿಯಲ್ಲಿ ಬರುವ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು.ಬಿಜೆಪಿಯ ಸಿ.ಟಿ.ರವಿ ಮಾತನಾಡಿ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುತ್ತಿರುವುರು ನ್ಯಾಯವಲ್ಲ. ಅಗತ್ಯವಾದರೆ ಮುಸ್ಲಿಂ ಸಮುದಾಯ ಹಲವು ಹಲವು ಉಪ ಜಾತಿಗಳು ಹಿಂದುಳಿದ ವರ್ಗದ ಮುಸ್ಲಿಮರಿದ್ದಾರೆ. ಅಂತಹವರಿಗೆ ಈ ಮೀಸಲಾತಿ ನೀಡಲು ಅಭ್ಯಂತರವಿಲ್ಲ ಎಂದರು.ಆಗ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮುಸ್ಲಿಮರೆಂದರೆ ಧರ್ಮವಲ್ಲ ಅದೊಂದು ಸಮುದಾಯ. ಇಸ್ಲಾಂ ಧರ್ಮಕ್ಕೆ ನಾವೇನು ಮೀಸಲಾತಿ ಒದಗಿಸುತ್ತಿಲ್ಲ. ಹೀಗಾಗಿ, ತಿದ್ದುಪಡಿ ವಿಧೇಯಕವನ್ನ ಸ್ವಾಗತಿಸುವುದಾಗಿ ಹೇಳಿದರು.

ಬಳಿಕ ಬಿಜೆಪಿ ಕೆ.ಎಸ್.‌ನವೀನ್ ಮಾತನಾಡಿ, ಗುತ್ತಿಗೆ ಮೀಸಲಾತಿ ಬದಲು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸವಲತ್ತು ನೀಡಿ ಈ ಮೂಲಕ ಅವರನ್ನ ಅಕ್ಷರವಂತರನ್ನಾಗಿ ಮಾಡಿ, ಶೇ.4ರಷ್ಟು ಗುತ್ತಿಗೆ ಮೀಸಲಾತಿ ಕಲ್ಪಿಸುವ ಸರ್ಕಾರ ರೂಪಿಸಿದ ಮಾನದಂಡಗಳೇನು? ಎಷ್ಟು ಮಂದಿ ಮುಸ್ಲಿಂ ಗುತ್ತಿಗೆದಾರರು ಸರ್ಕಾರಿ ಟೆಂಡರ್​​ನಲ್ಲಿ ಭಾಗಿಯಾಗುತ್ತಿರುವ ಮಾಹಿತಿ ಕಲೆ ಹಾಕಲಾಗಿದೆ? ಅತಿ ಹೆಚ್ಚು ಪರಿಶಿಷ್ಟರಿದ್ದು, ಅವರಿಗೆ ಹೆಚ್ಚುವರಿ ಮೀಸಲಾತಿ ಕಲ್ಪಿಸಬಹುದಿತ್ತು. ಹೀಗಾಗಿ, ವಿಧೇಯಕ ವಾಪಸ್ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಇದಕ್ಕೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಉತ್ತರ ನೀಡುತ್ತಿದ್ದಂತೆ, ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವಿಧೇಯಕ‌ ಪ್ರತಿಯನ್ನು ಹರಿದು ಬಿಸಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.‌ ಗದ್ದಲದ ನಡುವೆಯೇ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಯಿತು.

[t4b-ticker]
error: Content is protected !!