ಕರ್ನಾಟಕದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷಾ ವರದಿ

Picture of Savistara

Savistara

Bureau Report

ಕರ್ನಾಟಕ ರಾಜ್ಯದ ವಿಧಾನಸಭೆಗೆ ಇಂದು ಚುನಾವಣೆ ನಡೆದರೆ ಭಾರತೀಯ ಜನತಾ ಪಾರ್ಟಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ. ಜೆಡಿಎಸ್ ಮೂರನೇ ಸ್ಥಾನದಲ್ಲಿರಲಿದೆ ಎಂದು ಹೈದ್ರಾಬಾದ್ ಮೂಲದ ಪೀಪಲ್ಸ್ ಪಲ್ಸ್ ಮತ್ತು ಕೊಡೆಮೊ ಟೆಕ್ನಾಲಜೀಸ್ ನಡೆಸಿದ ಸಮೀಕ್ಷಾ ವರದಿ ಹೇಳಿದೆ.ಸುಮಾರು 1 ತಿಂಗಳ ಕಾಲ ನಡೆಸಿದ ಈ ಸಮೀಕ್ಷೆಯಲ್ಲಿ 10,481 ಜನರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಚುನಾವಣೆ ನಡೆದರೆ 136 ರಿಂದ 159 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ 62 ರಿಂದ 82 ಸೀಟುಗಳನ್ನು ಪಡೆಯಲಿದೆ. 2023 ರ ಚುನಾವಣೆಯಲ್ಲಿ ಶೇ 42.88 ರಷ್ಟು ಮತಗಳನ್ನು ಪಡೆದಿದ್ದ ಕಾಂಗ್ರೆಸ್, ಈಗ ಚುನಾವಣೆ ನಡೆದರೆ ಮತಗಳಿಗೆ ಪ್ರಮಾಣ ಶೇ 40.3ಕ್ಕೆ ಕುಸಿಯಲಿದೆ. ಸದ್ಯ ಕಾಂಗ್ರೆಸ್ ಆಡಳಿತ ವಿರೋಧ ಅಲೆ ಎದುರಿಸುತ್ತಿದೆ ಎಂದು ಸಮೀಕ್ಷೆ ಹೇಳಿರುವುದಾಗಿ ವರದಿಯಾಗಿದೆ.ಜೆಡಿಎಸ್ ಕೇವಲ 3 ರಿಂದ 6 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿದ್ದು, ಅದರ ಮತಗಳಿಕೆ ಪ್ರಮಾಣ ಶೇ 5 ಕ್ಕೆ ಕುಸಿಯಲಿದೆ. 2023 ರಲ್ಲಿ ಜೆಡಿಎಸ್ ಶೇ 18.3 ರಷ್ಟು ಮತಗಳನ್ನು ಪಡೆದಿತ್ತು. ಆ ಮೂಲಕ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ರಾಜ್ಯ ರಾಜಕಾರಣದಲ್ಲಿ ಕಳೆದ 20 ವರ್ಷಗಳಲ್ಲಿ (2004, 2008, 2018) ರಲ್ಲಿ ಬಿಜೆಪಿ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅಧಿಕಾರದ ಗದ್ದುಗೆ ಏರಲು ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

ಸಿದ್ಧರಾಮಯ್ಯ ಅತ್ಯಂತ ಜನಪ್ರಿಯ ಸಿಎಂಕಾಂಗ್ರೆಸ್ ಪಕ್ಷದಲ್ಲಿ ಸಿದ್ಧರಾಮಯ್ಯ ಈಗಲೂ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಶೇ 29.2 ರಷ್ಟು ಮತದಾರರು ಸಿದ್ಧರಾಮಯ್ಯ ಅವರಿಗಾಗಿ ಮತ ಹಾಕಲಿದ್ದಾರೆ. ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರವಾಗಿ ಮತ ಹಾಕುವವರ ಸಂಖ್ಯೆ ಶೇ 10.7 ರಷ್ಟು. ಬಿ.ಎಸ್.ಯಡಿಯೂರಪ್ಪ ಅವರಿಗಾಗಿ ಮತ ಹಾಕುವವರ ಸಂಖ್ಯೆ ಶೇ 5.5, ಬಸವರಾಜ ಬೊಮ್ಮಾಯಿಗೆ ಶೇ 3.6, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರವಾಗಿ ಶೇ 5.2 ರಷ್ಟು ಮತಗಳು ಆಯಾ ಪಕ್ಷಗಳಿಗೆ ಸಿಗುವ ಸಾಧ್ಯತೆಗಳಿವೆ.

ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಅತ್ಯಂತ ಜನಪ್ರಿಯ

ಮನೆಯ ಯಜಮಾನಿಗೆ ಮಾಸಿಕ ಎರಡು ಸಾವಿರ ನೀಡುವ ಕಾಂಗ್ರೆಸ್ ಸರಕಾರದ ಗೃಹಲಕ್ಷ್ಮಿ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 45.5 ರಷ್ಟು ಜನರು ಹೇಳಿದ್ದಾರೆ. ನಂತರದ ಸ್ಥಾನದಲ್ಲಿ ಶಕ್ತಿ (19%), ಅನ್ನಭಾಗ್ಯ (17%), ಗೃಹಜ್ಯೋತಿ (13.5%), ಯುವನಿಧಿ (2%) ಸ್ಥಾನ ಪಡೆದಿದೆ. ಶೇ 3 ರಷ್ಟು ಜನರಿಗೆ ಗ್ಯಾರಂಟಿಗಳ ಮಾಹಿತಿ ಇಲ್ಲ ಎಂದು ವರದಿ ಹೇಳಿದೆ.

[t4b-ticker]
error: Content is protected !!