ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠದ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಬೆಂಗಳೂರು: ಬೆಳ್ತಂಗಡಿಯ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಿರುವ ದಾಖಲೆಗಳನ್ನು 10 ದಿನಗಳಲ್ಲಿ ಹಾಜರು ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯ ನಿಯಮಗಳನ್ನು ಉಲ್ಲಂಸಿ ಸದಸ್ಯರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಬೆಳ್ತಂಗಡಿ ತಾಲೂಕು ಗೇರುಕಟ್ಟೆ ನಿವಾಸಿ ದಿವಾಕರ ಆಚಾರ್ಯ ಹಾಗೂ ಜನರ್ದಾನ ಪೂಜಾರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠದ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆಯ ಸೆಕ್ಷನ್ 25ರ ಪ್ರಕಾರ ಸದಸ್ಯರನ್ನು ನೇಮಕ ಮಾಡಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸಿನ ಮೇರೆಗೆ ನೇಮಕಾತಿ ನಡೆದಿದೆ ಎಂದರು. ಅದಕ್ಕೆ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು 10 ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಶಿಫಾರಸು ಪತ್ರದಲ್ಲಿ ಸಲ್ಲಿಸಿದ್ದ ಪಟ್ಟಿಯಲ್ಲಿದ್ದವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಅದರಂತೆ ಜಿಲ್ಲಾ ಧಾರ್ಮಿಕ ಪರಿಷದ್ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.ಎಂ. ರಾಘವೇಂದ್ರ, ನೀನಾ ಕುಮಾರ್, ಪಿ. ರೀಟಾ, ಮೋಹಿನಿ, ಹೇಮಂತ್ ಕುಮಾರ್, ಶರತ್ ಕುಮಾರ್, ಎಚ್. ರಾಘವ, ಕೆ. ಹರೀಶ್ ಹಾಗೂ ಬಿ. ಹರೀಶ್ ಕುಮಾರ್ ಅವರನ್ನು ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಲಾಗಿದೆ. ಈ ನೇಮಕಾತಿಯು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.














































