ಧರ್ಮಸ್ಥಳದ ಪರ ಬೀದಿಗಿಳಿದ ಭಕ್ತರು: ದೇಗುಲದ ಅಪಪ್ರಚಾರ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ, ಜನಾಕ್ರೋಶ

Picture of Savistara

Savistara

Bureau Report

ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಭಕ್ತರು ಬೀದಿಗಳಿದು ಇಂದು ಪ್ರತಿಭಟನೆ ನಡೆಸಿದರು.

ಬೆಳಗಾವಿ/ಚಾಮರಾಜನಗರ/ಮೈಸೂರು/ಚಿಕ್ಕಮಗಳೂರು/ತುಮಕೂರು/ಗದಗ: ರಾಜ್ಯದ ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಧರ್ಮಸ್ಥಳದ ಭಕ್ತರು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಿರುದ್ಧ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಕಿಡಿಗೇಡಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ ಅಪಪ್ರಚಾರ ಮಾಡುತ್ತಿದ್ದು ಧಾರ್ಮಿಕ ನಂಬಿಕೆ, ಸಾಮಾಜಿಕ ಸಾಮರಸ್ಯ ಹಾಗು ಶಾಂತಿ ಕೆಡಿಸುತ್ತಿದ್ದಾರೆ. ಇಂಥವರ ವಿರುದ್ಧ ದೂರು ದಾಖಲಿಸಿಕೊಂಡು ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಎಲ್ಲೆಡೆಯಿಂದ ಕೇಳಿಬರುತ್ತಿದೆ.

ಅಪಪ್ರಚಾರ ಮಾಡುತ್ತಿರುವವರ ತನಿಖೆಗೆ ಮತ್ತೊಂದು ಎಸ್ಐಟಿ ರಚಿಸುವಂತೆ ಆಗ್ರಹ: ಬೆಳಗಾವಿಯಲ್ಲಿಂದು ನೂರಾರು ಭಕ್ತರು ಬೀದಿಗಿಳಿದು ಬೃಹತ್ ಪ್ರತಿಭಟಿಸಿದರು. ಧರ್ಮಸ್ಥಳದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ತನಿಖೆಗೆ ಮತ್ತೊಂದು ವಿಶೇಷ ತನಿಖಾ ದಳ (ಎಸ್ಐಟಿ) ರಚಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಹೆಸರಿನಲ್ಲಿ ಪ್ರತಿಭಟಿಸಿದ ಸಾರ್ವಜನಿಕರು, ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ತೀವ್ರ ಆಕ್ರೋಶ ಹೊರಹಾಕಿದರು. ಪ್ರತಿಭಟನೆಗೆ ಹಲವು ಸ್ವಾಮೀಜಿಗಳು, ಹಿಂದೂಪರ ಸಂಘಟನೆಗಳು ಸಾಥ್ ಕೊಟ್ಟರು.ಧರ್ಮಸ್ಥಳದ ಪರ ದನಿ ಎತ್ತಿದ ಮುಸ್ಲಿಂ ಮಹಿಳೆಯರು: ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ಕೆಲವು ಮುಸ್ಲಿಂ ಮಹಿಳೆಯರೂ ಪಾಲ್ಗೊಂಡು ಧರ್ಮಸ್ಥಳದ ಪರ ಧ್ವನಿ ಎತ್ತಿದರು. ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.ಧರ್ಮರಕ್ಷಣೆ ನಮ್ಮೆಲ್ಲರ ಹೊಣೆ, ಕ್ಷೇತ್ರದೊಂದಿಗೆ ನಾವಿದ್ದೇವೆ, ಜೈ ಧರ್ಮಸ್ಥಳ, ಜೈ ಮಂಜುನಾಥ ಸ್ವಾಮಿ, ಜೈ ಅಣ್ಣಪ್ಪಸ್ವಾಮಿ ಎಂಬ ಬರಹಗಳಿರುವ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕ್ಷೇತ್ರದ ಭಕ್ತರಾದ ಮಂಜುನಾಥ ನಾಗೋಜಿ ಎಂಬವರು ಮಾಧ್ಯಮಗಳೊಂದಿಗೆ ಮಾತನಾಡಿ, “ಶ್ರೀ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸವಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಪವಿತ್ರ ಧರ್ಮಸ್ಥಳಕ್ಕೆ ಬಂದು, ಮಂಜುನಾಥ ದೇವರ ಆಶೀರ್ವಾದ ಪಡೆಯುತ್ತಾರೆ. ಇಂಥ ಸುಕ್ಷೇತ್ರದ ಹೆಸರಿಗೆ ಹಾನಿ ಮಾಡುವ ಕೆಲಸಗಳು ಆಗುತ್ತಿರುವುದು ಸರಿಯಲ್ಲ. ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಕೈಯಾಡಿಸದ ಕೃತಿ ಇಲ್ಲ ಎಂಬ ನಾಣ್ಣುಡಿ ಇದೆ. ಸಮಾಜಘಾತುಕ ಶಕ್ತಿಗಳು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ, ಅವಮಾನ ಮಾಡುತ್ತಿರುವುದು ನಮಗೆ ತೀವ್ರ ನೋವು ತಂದಿದೆ. ಹಾಗಾಗಿ, ಅಂಥವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು” ಎಂದು ಒತ್ತಾಯಿಸಿದರು.”ಅನಾಮಿಕ ವ್ಯಕ್ತಿ ಕೊಟ್ಟ ದೂರಿನ ಆಧಾರದ ಮೇಲೆ ಸರ್ಕಾರ ಎಸ್ಐಟಿ ರಚಿಸಿದ್ದು, ತನಿಖೆ ನಡೆಯುತ್ತಿದೆ. ತನಿಖೆಯ ಮಧ್ಯಂತರ ವರದಿ ಇನ್ನೂ ಸಲ್ಲಿಕೆ ಆಗಿಲ್ಲ. ಇಂಥ ಸಂದರ್ಭದಲ್ಲಿ ಧರ್ಮಸ್ಥಳದ ಬಗ್ಗೆ ಜಾಲತಾಣದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ಆಗುತ್ತಿದೆ. ಹಾಗಾಗಿ, ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ, ಸುಳ್ಳು ಆರೋಪ ಮಾಡಲು ಅವರಿಗೆ ಪ್ರಚೋದನೆ ನೀಡುತ್ತಿರುವವರು, ಈ ತಂಡಕ್ಕೆ ಬರುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಸೂಕ್ತ ತನಿಖೆ ನಡೆಸಲು ಮತ್ತೊಂದು ಎಸ್ಐಟಿ ತಂಡ ರಚಿಸಬೇಕು” ಎಂದು ಮತ್ತೋರ್ವ ಭಕ್ತರಾದ ಗಂಗಾಧರ ಸೋನಾರ ಎಂಬವರು ಆಗ್ರಹಿಸಿದರು.

ಗಡಿಜಿಲ್ಲೆಯಲ್ಲಿಯೂ ಧರ್ಮಸ್ಥಳ ಭಕ್ತರಿಂದ ಬೃಹತ್ ಪ್ರತಿಭಟನೆ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಮ್ಮನೆ ಅಪಪ್ರಚಾರ ನಡೆಸಲಾಗುತ್ತಿದೆ ಆರೋಪಿಸಿ ಚಾಮರಾಜನಗರದಲ್ಲಿ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಡಿ ನೂರಾರು ಅಭಿಮಾನಿಗಳು, ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರು, ಹಿಂದೂ ಸಂಘಟನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಕಿಡಿ ಕಾರಿದರು. ಚಾಮರಾಜೇಶ್ವರ ದೇವಾಲಯದಿಂದ ಪ್ಲಕಾರ್ಡ್ ಹಿಡಿದು ಡಿಸಿ ಕಚೇರಿವರೆಗೆ ಜನಾಗ್ರಹ ಜಾಥಾ ನಡೆಸಿದ ಜನರು, ಕಿಡಿಗೇಡಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ಇದೇ ರೀತಿ ಅಗೆಯುತ್ತಾ ಹೋದರೇ ಯಾವಾಗ ಕೊನೆ ಎಂದು ಪ್ರಶ್ನಿಸಿದರು.

ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೈಸೂರಿನಲ್ಲಿ ಪ್ರತಿಭಟನೆ: ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು‌ ಒತ್ತಾಯಿಸಿ, ಕರ್ನಾಟಕ ಸೇನೆ ಪಡೆಯಿಂದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಭಕ್ತರನ್ನು ಕೆರಳಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ, ಶವ ಸಂಸ್ಕಾರ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರದ ಮಂಜುನಾಥಸ್ವಾಮಿ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಚಿಕ್ಕಮಗಳೂರಿನಲ್ಲೂ ಪ್ರ್ರತಿಭಟನೆ: ಅನಾಮಿಕ ವ್ಯಕ್ತಿಯನ್ನು ಬಳಸಿಕೊಂಡು ಶ್ರೀಕ್ಷೇತ್ರದ ಪಾವಿತ್ರ್ಯತೆಗೆ ಕಳಂಕ ತರಲಾಗುತ್ತಿದೆ ಎಂದು ಆರೋಪಿಸಿ ಚಿಕ್ಕಮಗಳೂರಲ್ಲೂ ಪ್ರತಿಭಟನೆ ನಡೆಯಿತು. 2000 ಸಾವಿರಕ್ಕೂ ಹೆಚ್ಚು ಭಕ್ತರು ಪ್ರ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಉದ್ಧಕ್ಕೂ ಮೈಕಿನಲ್ಲಿ ಓಂ ನಮಃ ಶಿವಾಯ ಭಜಿಸಿ ಆಕ್ರೋಶ ವ್ಯಕ್ತಪಡಿಸಿದರು. 2 ಕಿ.ಮೀ. ಪ್ರತಿಭಟನಾ ಮೆರವಣಿಗೆ ಕೂಡ ನಡೆಸಿದರು. ಸುಳ್ಳಿನ ಮೃತದೇಹದ ಹಿಂದೆ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಆಗಿದ್ದು, ಕುತಂತ್ರಿಗಳ ಷಡ್ಯಂತ್ರಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮಟೆ ಬಾರಿಸಿಕೊಂಡು ಎಂ.ಜಿ.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ‌ ಸಾಗಿದ್ದು, ನೂರಾರು ಮಹಿಳೆಯರು ಭಾಗಿಯಾಗಿದ್ದರು. ಸುಳ್ಳು ಆರೋಪ ಹೊರಿಸುತ್ತಿರುವವ ಮೇಲೆ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ತುಮಕೂರಿನಲ್ಲಿ ಜೈನ ಸಂಘ, ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ: ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಕೆಲವು ಕಿಡಿಗೇಡಿಗಳು ವ್ಯವಸ್ಥಿತ ಷಡ್ಯಂತ್ರದಿಂದ ಶ್ರೀಕ್ಷೇತ್ರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಧಾರ್ಮಿಕ ನಂಬಿಕೆ, ಸಾಮಾಜಿಕ ಸಾಮರಸ್ಯ ಹಾಗು ಶಾಂತಿ ಕೆಡಿಸುತ್ತಿರುವವರ ವಿರುದ್ಧ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತುಮಕೂರಿನಲ್ಲಿಯೂ ಪ್ರತಿಭಟನೆ ನಡೆಯಿತು. ಜೈನ ಸಂಘ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂಪುರ ಸಂಘಟನೆಗಳು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದವು. ನಗರದ ಟೌನ್ ಹಾಲ್ ವೃತ್ತದಿಂದ ಹೊರಟ ಪ್ರತಿಭಟನಾಕಾರರು, ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾಕಾರರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗದಗ ಜಿಲ್ಲೆಯಲ್ಲೂ ಆಕ್ರೋಶ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿಯೂ ಭಾರೀ ಆಕ್ರೋಶ ವ್ಯಕ್ತವಾಗಿದೆ. ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿ, ಅಪಪ್ರಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ನಗರದ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಬಳಿಕ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ, ಧರ್ಮಸ್ಥಳದ ವಿರುದ್ಧದ ಕುತಂತ್ರಕ್ಕೆ ಆಕ್ರೋಶ ಹೊರಹಾಕಿದರು. ಈ ಪ್ರತಿಭಟನೆಗೆ ಜಿಲ್ಲೆಯ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ಜೈನ ಸಮುದಾಯ, ಆಟೋ ಸೇನೆ ಸೇರಿದಂತೆ ಹಲವು ಸಂಘಟನೆಗಳು ಸಾಥ್ ನೀಡಿದ್ದವು.

ಹಿಂದೂಗಳಿಗೆ ಹಿಂದೂಗಳೇ ಶತ್ರುವಾದಂತಿದೆ-ಮುಕ್ಕಣ್ಣೇಶ್ವರ ಸ್ವಾಮೀಜಿ: ಪ್ರತಿಭಟನೆಯಲ್ಲಿ ಗದಗದ ಶ್ರೀ ಮುಕ್ಕಣ್ಣೇಶ್ವರ ಸ್ವಾಮೀಜಿ ಪಾಲ್ಗೊಂಡು ಮಾತನಾಡಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಹಿಂದೂಗಳಿಗೆ ಹಿಂದೂಗಳೇ ಶತ್ರುವಾದಂತಾಗಿದೆ. ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು, ಆದರೆ ಅವಳ ಹೆಸರಿನಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಹಾನಿ ಮಾಡುವ ಕೆಲಸ ನಡೆಯುತ್ತಿದೆ” ಎಂದು ಹೇಳಿದರು.

[t4b-ticker]
error: Content is protected !!