Lucknow: ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಕುರಿತಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ನೀಡಿರುವ ಹೇಳಿಕೆ, ದೇಶ್ಯಾದ್ಯಂತ ಟೀಕೆಗೆ ಗುರಿಯಾಗಿದೆ.
ಸಭೆಯೊಂದರಲ್ಲಿ ಮಾತನಾಡಿದ್ದ ಯಾದವ್, ಪ್ರಪಂಚದಾದ್ಯಂತ ನಡೆಯುವ ಕ್ರಿಸ್‌ಮಸ್ ಆಚರಣೆಯ ಸಮಯದಲ್ಲಿ ತಿಂಗಳು ಪರ್ಯಂತ ನಗರಗಳು ಲೈಟ್‌ಗಳಿಂದ ಬೆಳಗುತ್ತವೆ, ಆದರೆ ನಾವು ದೀಪಾವಳಿಯ ಸಂದರ್ಭದಲ್ಲಿ ದೀಪಗಳು ಮತ್ತು ಮೇಣದಬತ್ತಿಗಳಿಗಾಗಿ ಹಣವನ್ನು ಖರ್ಚು ಮಾಡುತಿದ್ದೇವೆ. ಈ ವಿಷಯದಲ್ಲಿ ಕ್ರೈಸರ ಕ್ರಿಸ್ಮಸ್‌ನಿಂದ ಪಾಠ ಕಲಿಯಬೇಕಿದೆ. ಈ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ..?. ದೀಪಗಳನ್ನು ತೆಗೆದುಹಾಕಬೇಕು. ಸುಂದರವಾದ ಲೈಟ್‌ಗಳ ಮೂಲಕ ಹಬ್ಬವನ್ನು ಆಚರಿಸಬೇಕು ಎಂದರು.
ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, ಯಾದವ್‌ರನ್ನು ತರಾಟೆಗೆ ತೆಗೆದುಕೊಂಡರು. ಈ ಮಾಜಿ ಮುಖ್ಯಮಂತ್ರಿ ದೀಪಾವಳಿ ಸಂದರ್ಭದಲ್ಲಿ ಕ್ರಿಸ್‌ಮಸ್ ಅನ್ನು ಹೊಗಳುತ್ತಿದ್ದಾರೆ ಕೇಳಿ. ದೀಪಗಳ ಸಾಲುಗಳು ಅವರ ಹೃದಯವನ್ನು ಎಷ್ಟು ಸುಟ್ಟುಹಾಕಿವೆಯೆಂದರೆ, ಇದು 100 ಕೋಟಿ ಹಿಂದೂಗಳಿಗೆ ದೀಪ ಮತ್ತು ಮೇಣದಬತ್ತಿಗಳಿಗಾಗಿ ಹಣವನ್ನು ವ್ಯರ್ಥ ಮಾಡಬೇಡಿ, ಕ್ರಿಸ್‌ಮಸ್‌ನಿಂದ ಕಲಿಯಿರಿ ಎಂದು ಬೋಧನೆ ಮಾಡುತಿದ್ದಾರೆ ಎಂದು ಹೇಳಿದರು. ಅಖಿಲೇಶ್ ಭಾರತೀಯ ಸಂಸ್ಕೃತಿಗಿಂತ ವಿದೇಶಿ ಸಂಪ್ರದಾಯಗಳನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿದ ಬನ್ಸಾಲ್, ಜಿಹಾದಿಗಳು ಮತ್ತು ಮತಾಂತರ ಗ್ಯಾಂಗ್‌ಗಳ ಮೆಸ್ಸಿಯ ಎಂದು ಕರೆಯಲ್ಪಡುವ, ತಮ್ಮನ್ನು ತಾವು ಯಾದವ್ ಎಂದು ಕರೆದುಕೊಳ್ಳುವವರು, ಹಿಂದೂಗಳಿಗಿಂತ ಕ್ರಿಶ್ಚಿಯನ್ನರನ್ನು ಹೆಚ್ಚು ಪ್ರೀತಿಸುತ್ತಾರೆ. ಅವರು ಸ್ಥಳೀಯ ಹಬ್ಬಗಳಿಗಿಂತ ವಿದೇಶಿ ಹಬ್ಬಗಳನ್ನು ಹೆಚ್ಚು ವೈಭವೀಕರಿಸುತ್ತಾರೆ ಎಂದರು.44ಕ್ರೈಸ್ತ ಧರ್ಮ ಅಸ್ತಿತ್ವದಲ್ಲಿಲ್ಲದಿರುವಾಗಲೇ ದೀಪಾವಳಿಯನ್ನು ತನ್ನ ಆಚರಣೆಗಳು ಮತ್ತು ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತಿತ್ತು. ಈಗ, ಹಿಂದೂ ಸಮಾಜಕ್ಕೆ ಕ್ರಿಶ್ಚಿಯನ್ನರಿಂದ ಕಲಿಯುವಂತೆ ಹೇಳಲಾಗುತ್ತಿದೆ. ಭಗವಾನ್ ರಾಮ ಮತ್ತು ಶ್ರೀಕೃಷ್ಣನ ಪವಿತ್ರ ಭೂಮಿಯಲ್ಲಿ, ಅಪರಾಧಿಗಳು ಮತ್ತು ಉಗ್ರಗಾಮಿಗಳಿಂದಲೇ ತಮ್ಮ ಸಚಿವ ಸಂಪುಟಗಳನ್ನು ತುಂಬಿದ ನಾಯಕರ ಆಳ್ವಿಕೆಯಲ್ಲಿ ಅಕ್ರಮ ಧಾರ್ಮಿಕ ಮತಾಂತರಗಳು ಪ್ರವರ್ಧಮಾನಕ್ಕೆ ಬಂದಿವೆ ಎಂದು ಆರೋಪಿಸಿದರು..
ಯಾದವ್‌ಗೆ ಇನ್ನೂ ಎರಡು ತಿಂಗಳು ಬಾಕಿ ಇರುವ ವಿದೇಶಿ ಹಬ್ಬ ಕ್ರಿಸ್‌ಮಸ್ ಈಗಾಗಲೇ ಬಂದಿದೆ ಎಂಬಂತೆ ವರ್ತಿಸುತ್ತಿದ್ದು, ಕೇವಲ ಎರಡು ದಿನಗಳ ಅಂತರದಲ್ಲಿರುವ ದೀಪಾವಳಿ ಹಬ್ಬ ಮತ್ತು ನಮ್ಮ ಕುಂಬಾರ ಸಹೋದರರು ತಯಾರಿಸಿದ ದೀಪಗಳು ಪಿಡಿಎಯ ಕಪಟಿಗಳನ್ನು ಕಾಡುತ್ತಿರುವಂತೆ ತೋರುತ್ತಿದೆ. ಹಿಂದೂಗಳ ಸಂಭ್ರಮದ ಮೇಲಿನ ಈ ಅಸೂಯೆ ಸರಿಯಲ್ಲ. ಬಹುಶಃ ಈ ಕಾರಣದಿಂದಲೇ ಜನರು ಸಮಾಜವಾದಿ ಪಕ್ಷವನ್ನು, ಅಸಮಾಜವಾದಿ ಪಕ್ಷ (ಸಮಾಜ ವಿರೋಧಿ ಪಕ್ಷ) ಎಂದು ಕರೆಯುತ್ತಾರೆ ಎಂದರು.
ಬಿಜೆಪಿಯಿಂದ ಟೀಕೆ..
ಬಿಜೆಪಿ ನಾಯಕರು ಅಖಿಲೇಶ್ ಯಾದವ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಯಾದವ್ ಮತ್ತು ಎಸ್‌ಪಿ, ಹಿಂದೂ ಸಂಪ್ರದಾಯಗಳನ್ನು ದುರ್ಬಲಗೊಳಿಸುತ್ತಿದೆ. ಅಯೋಧ್ಯೆಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.ಈ ವಿಷಯವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಲಾ, ಇದು ಸನಾತನ ವಿರೋಧಿ ವ್ಯವಸ್ಥೆ. ರಾಮ ಮಂದಿರದ ಆಂದೋಲನವನ್ನೇ ವಿರೋಧಿಸಿದ್ದ, ಅಯೋಧ್ಯಾ ನಗರವನ್ನು ವರ್ಷಗಳ ಕಾಲ ಉದ್ದೇಶಪೂರ್ವಕವಾಗಿ ಕತ್ತಲೆಯಲ್ಲಿಟ್ಟಿದ್ದ ಮತ್ತು ರಾಮ ಭಕ್ತರ ಮೇಲಿನ ದಾಳಿಯ ಇತಿಹಾಸ ಹೊಂದಿರುವ ಪಕ್ಷವು ಈಗ ದೀಪೋತ್ಸವಕ್ಕಾಗಿ ತಯಾರಾಗಿರುವ ನಗರದ ಅಲಂಕಾರವನ್ನು ವಿರೋಧಿಸುತ್ತಿದೆ ಎಂದು ಹೇಳಿದರು.
ಗಿನ್ನೆಸ್ ದಾಖಲೆಗೆ ಅಯೋಧ್ಯೆ ಸಜ್ಜು…
ಭಾನುವಾರ ಸರಯು ನದಿಯ 56 ಘಾಟ್‌ಗಳಲ್ಲಿ ನಡೆಯಲಿರುವ ದೀಪೋತ್ಸವಕ್ಕೆ ಅಯೋಧ್ಯೆ ನಗರಿ ಸಜ್ಜಾಗಿದ್ದು, ಅದಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ, ಉತ್ತರ ಪ್ರದೇಶ ಸರ್ಕಾರ 31 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಮತ್ತೊಮ್ಮೆ ಗಿನ್ನೆಸ್ ದಾಖಲೆಯ ಗುರಿಯನ್ನು ಸಾಧಿಸುವ ಗುರಿ ಹೊಂದಿದೆ. ಕಳೆದ ವರ್ಷ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ 25.12 ಲಕ್ಷ ದೀಪಗಳನ್ನು ಬೆಳಗಲಾಗಿತ್ತು. ದೀಪೋತ್ಸವದ ತಯಾರಿಯ ಕುರಿತು ಮಾತನಾಡಿದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್, ಗಿನ್ನೆಸ್ ಬಿಡ್‌ಗೆ ಅಗತ್ಯವಿರುವ ಕನಿಷ್ಠ ಗುರಿ 26.11 ಲಕ್ಷ ದೀಪ. ಸದ್ಯ 33,000 ಸ್ವಯಂಸೇವಕರು 31 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಿದ್ದಾರೆ ಎಂದು ಮಾಹಿತಿ ನೀಡಿದರು.













































