ಈ ಬಾರಿ ಐದು ದಿನದ ದೀಪಾವಳಿ ಹಬ್ಬ | ದೀಪಾವಳಿ ವಿಶೇಷತೆಯ ಬಗ್ಗೆ ನಿಮಗೆ ತಿಳಿದಿದೆಯಾ!!?? ಇಲ್ಲಿದೆ ಹಬ್ಬದ ವಿಶೇಷತೆಯ ಮಾಹಿತಿ

Picture of Savistara

Savistara

Bureau Report

“ದೀಪಯತಿ ಸ್ವಂ ಪರಚ ಇತಿ ದೀಪ:”
ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ.
ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ,
ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ.

ಆಶ್ವಯುಜದ ಕೊನೆ ಮತ್ತು ಕಾರ್ತೀಕ ಮಾಸದ ಆರಂಭದ ದಿನಗಳಲ್ಲಿಅದ್ಧೂರಿಯ ಆಚರಣೆ

ಜಲ ತ್ರಯೋದಶಿ ಅಥವಾ ಧನತ್ರಯೋಧಶಿ ಹಬ್ಬದ ಮೊದಲ ದಿನ.
ಈ ದಿನ ಬಿಂದಿಗೆ ಗಳನ್ನು ಅಲಂಕರಿಸಿ ಹೊಸ ನೀರನ್ನು ತುಂಬಿ ಗಂಗಾ ಮಾತೆಯನ್ನು ಆಹ್ವಾನಿಸಿ ಪೂಜಿಸುತ್ತಾರೆ ಹಾಗೆಯೆ ಧನತ್ರಯೋದಶಿಯ ವಾಡಿಕೆಯಂತೆ ಸ್ವರ್ಣ ಖರೀದಿಸಿದರೆ ಅಕ್ಷಯವಾಗುತ್ತದೆ ಹಾಗೂ ಲಕ್ಷ್ಮೀ ಕೃಟಾಕ್ಷ ಲಭಿಸುತ್ತದೆ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ

ನರಕ ಚತುರ್ದಶಿ
ಎರಡನೇ ದಿನ

ದೀಪಾವಳಿ ಹಬ್ಬವನ್ನು ಶ್ರೀ ರಾಮಚಂದ್ರನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದದಿನವೆಂದೂ… ಶ್ರೀ ಕೃಷ್ಣನು ನರಕಾಸುರನನ್ನು ಕೊಂದದಿನವೆಂದೂ ಆಚರಿಸುತ್ತಾರೆ.

ನರಕ ಚತುರ್ದಶಿಯು ದೀಪಾವಳಿಯ ಪ್ರಮುಖ ದಿನ.ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ಶಾಸ್ತ್ರವು ಹೇಳಿರುತ್ತದೆ.

ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುರ್ದಶಿ |
ಪ್ರಾತ: ಸ್ನಾನಂ ತು ಯ: ಕುರ್ಯಾದ್ಯಮಲೋಕಂ ನ ಪಶ್ಯತಿ||

ತೈಲದಲ್ಲಿ ಲಕ್ಷ್ಮೀದೇವಿಯೂ, ನೀರಿನಲ್ಲಿ ಗಂಗೆಯೂ ದೀಪಾವಳಿಯ ಚತುರ್ದಶಿಯಂದು ವಿಶೇಷವಾಗಿ ಸನ್ನಿಹಿತ ರಾಗಿರುತ್ತಾರೆ ಎಂದು ಶಾಸ್ತ್ರ ತಿಳಿಸುತ್ತದೆ.

ಅಂದು ಬೆಳಿಗ್ಗೆ ಸುಮಂಗಲೆಯರಿಂದ ತೈಲವನ್ನು ಹಚ್ಚಿಸಿಕೊಂಡು ಆರತಿ ಮಾಡಿಸಿಕೊಳ್ಳುವುದು ನಂತರ ಅಭ್ಯಂಜನವನ್ನು ಮಾಡುವುದು ಈ ಹಬ್ಬದ ಪ್ರಮುಖ ಅಂಗ.

ಅಭ್ಯಂಗನ ಸ್ನಾನದ ನಂತರ ಹೊಸ ಬಟ್ಟೆ ಧರಿಸಿ, ಮನೆಯ ಹಿರಿಯರಿಗೆ ನಮಸ್ಕರಿಸಿ, ಸಿಹಿ ತಿಂದು ಪಟಾಕಿ ಹಚ್ಚುತ್ತಾರೆ ಮಕ್ಕಳು…..ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿ ಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ.

ಆ ಪದ್ಧತಿಯಂತೆ ಇಂದಿಗೂ ಆರತಿ ಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.

ದೀಪಾವಳಿ ಅಮಾವಾಸ್ಯೆ

ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯಂದು ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮೀ ಪೂಜೆಯನ್ನು ಮಾಡಿ,ಮನೆಯತುಂಬಾ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ತುಂಬಾ ಪ್ರಶಸ್ತವಾದ ದಿನಲಕ್ಷ್ಮೀ ಪೂಜೆಗೆ.

ಇದು ಶ್ರೀ ಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ , ನಚೀಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಹೇಳುತ್ತಾರೆ.

ಬಲಿ ಪಾಡ್ಯಮಿ

ನಾಲ್ಕನೆಯ ದಿನವನ್ನು ಬಲಿ ಪಾಡ್ಯಮಿ ಎಂದು ಕರೆಯುತ್ತಾರೆ.

ವಿಷ್ಣು ಪುರಾಣದ ಪ್ರಕಾರ ಶ್ರೀ ಕೃಷ್ಣನು ಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ.

ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನಪೂಜೆಗೆ ಮಹತ್ವ.

ಮನೆಯಲ್ಲಿನ ಎತ್ತುಗಳಿಗೂ ಪೂಜೆ ಸ್ನಾನ ಮಾಡಿಸಿ, ಅರಿಸಿನ ಕುಂಕುಮ ಹಚ್ಚಿ, ಕೊಂಬಿಗೆ ಸೇವಂತಿಗೆ, ಚೆಂಡು ಹೂಗಳನ್ನು ಸುತ್ತಿ ಪೂಜಿಸುತ್ತಾರೆ.

ಎತ್ತುಗಳ ಮೆರವಣಿಗೆ ಕೂಡ ಮಾಡುತ್ತಾರೆ ಗದ್ದೆಗಳಲ್ಲಿ, ಹೊಲಗಳಲ್ಲಿ ಧಾನ್ಯಲಕ್ಷ್ಮಿಯ ಪೂಜೆಯನ್ನೂ ಮಾಡುತ್ತಾರೆ.

ಹಾಗೇ ಈ ದಿನ ಮಹಾಬಲಿ ಭೂಮಿಗೆ ಬರುತ್ತಾನೆಂಬುದೂ ಒಂದು ನಂಬಿಕೆ.

ಹೊಲ, ಗದ್ದೆಗಳಲ್ಲಿ ಬಲೀಂದ್ರನ ಸ್ಮರಣಾರ್ಥದೀಪಗಳನ್ನು ಕೂಡ ಹಚ್ಚಿಡುತ್ತಾರೆ.

ಯಮ ದ್ವಿತೀಯ

ಐದನೆಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃದ್ವಿತೀಯಾ ಎಂದು ಆಚರಿಸುತ್ತಾರೆ.

ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ.

ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ.

ಈ ರೀತಿ ನಮ್ಮ ಸಂಸ್ಕೃತಿಯ ಸೊಬಗನ್ನು ನಾವು ಅರಿತುಶ್ರದ್ಧೆಯಿಂದ ಆಚರಿಸಿದರೆ ಈ ಸಡಗರದ-ಸಂಭ್ರಮದ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮದ,ಸಡಗರದ ವಾತಾವರಣ
ಮನೆಯಲ್ಲಿ ಧನಾತ್ಮಕ ತರಂಗಗಳನ್ನು
ಆಹ್ವಾನಿಸುತ್ತದೆ.
ಸರ್ವರಿಗೂ ದೀಪಾವಳಿ ಹಬ್ಬ ಸನ್ಮಂಗಳನ್ನುಂಟು ಮಾಡಲಿ

[t4b-ticker]
error: Content is protected !!