ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಮತ್ತು ರಾಜ್ಯ ಘಟಕಗಳ ನೂತನ ಅಧ್ಯಕ್ಷರ ಆಯ್ಕೆಗೆ ಜನವರಿ 20ರಂದು ಚುನಾವಣೆ ನಡೆಯಲು ಸಿದ್ಧತೆಗಳಾಗಿವೆ. ಆದರೆ, ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ. ಈ ಮೂಲಕ 2028ರ ವಿಧಾನಸಭಾ ಚುನಾವಣೆಯವರೆಗೂ ಬಿ.ವೈ. ವಿಜಯೇಂದ್ರ ಅವರೇ ರಾಜ್ಯ ಬಿಜೆಪಿಯ ಸಾರಥಿಯಾಗಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರು: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಮತ್ತು ರಾಜ್ಯ ಘಟಕಗಳ ನೂತನ ಅಧ್ಯಕ್ಷರ ಆಯ್ಕೆಗೆ ಜನವರಿ 20ರಂದು ಚುನಾವಣೆ ನಡೆಯಲು ಸಿದ್ಧತೆಗಳಾಗಿವೆ. ಆದರೆ, ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ. ಈ ಮೂಲಕ 2028ರ ವಿಧಾನಸಭಾ ಚುನಾವಣೆಯವರೆಗೂ ಬಿ.ವೈ. ವಿಜಯೇಂದ್ರ ಅವರೇ ರಾಜ್ಯ ಬಿಜೆಪಿಯ ಸಾರಥಿಯಾಗಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.
ರೆಬೆಲ್ ನಾಯಕರಿಗೆ ಮುಖಭಂಗ: ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ‘ರೆಬೆಲ್’ ತಂಡ ನಿರಂತರವಾಗಿ ಕಸರತ್ತು ನಡೆಸಿತ್ತು. ವಿಜಯೇಂದ್ರ ಅವರು ಹಿರಿಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಮತ್ತು ವಂಶಪಾರಂಪರ್ಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದರು. ಆದರೆ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಸುಮಾರು 30 ರಾಜ್ಯಗಳಲ್ಲಿ ನಾಯಕತ್ವದ ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಕರ್ನಾಟಕದಲ್ಲಿ ಮಾತ್ರ ವಿಜಯೇಂದ್ರ ಅವರನ್ನು ಮುಂದುವರಿಸಲು ವರಿಷ್ಠರು ಒಲವು ತೋರಿದ್ದಾರೆ. ಇದು ಬದಲಾವಣೆ ನಿರೀಕ್ಷೆಯಲ್ಲಿದ್ದ ಬಂಡಾಯ ನಾಯಕರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
2028ರವರೆಗೆ ವಿಜಯೇಂದ್ರ ಸಾರಥ್ಯ: “ಕರ್ನಾಟಕದಲ್ಲಿ ಈಗಿರುವ ವ್ಯವಸ್ಥೆಯನ್ನು ಬದಲಿಸಿ ಮತ್ತಷ್ಟು ಗೊಂದಲ ಸೃಷ್ಟಿಸುವುದು ಬೇಡ” ಎನ್ನುವುದು ಹೈಕಮಾಂಡ್ ತೀರ್ಮಾನವಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೂ, 2028ರ ಚುನಾವಣಾ ದೃಷ್ಟಿಯಿಂದ ವಿಜಯೇಂದ್ರ ಅವರ ನಾಯಕತ್ವವನ್ನೇ ಉಳಿಸಿಕೊಳ್ಳಲು ಬಿಜೆಪಿ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಬಂಡಾಯವೆದ್ದಿದ್ದ ಯತ್ನಾಳ್, ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಉಚ್ಛಾಟಿಸಿರುವುದರಿಂದ ಪಕ್ಷದಲ್ಲಿ ಸದ್ಯ ವಿರೋಧದ ಧ್ವನಿಗಳು ಕ್ಷೀಣಿಸಿವೆ.
ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್?
ಇನ್ನೊಂದೆಡೆ, ರಾಷ್ಟ್ರೀಯ ಮಟ್ಟದಲ್ಲಿ ಜೆ.ಪಿ. ನಡ್ಡಾ ಅವರ ನಂತರ ಬಿಜೆಪಿಯ ಸಾರಥ್ಯವನ್ನು ಯಾರು ವಹಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.ಬಿಹಾರದ ಕಿರಿಯ ನಾಯಕ ಮತ್ತು ಪ್ರಸ್ತುತ ಕಾರ್ಯಾಧ್ಯಕ್ಷರಾಗಿರುವ ನಿತಿನ್ ಬಿನ್ ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಜ.19 ರಂದು ಅವರು ನಾಮಪತ್ರ ಸಲ್ಲಿಸಲಿದ್ದು, ಜ.20 ರಂದು ಅಧಿಕೃತವಾಗಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ.












































