ಸುಳ್ಯ :_ ಬ್ರಹ್ಮರಕೂಟ್ಲು ಟೋಲ್ ತೆರವು ವಿಚಾರವಾಗಿ ಕಾಂಗ್ರೆಸ್ ಪಕ್ಷ ನಾಯಕ ರಮಾನಾಥ್ ರೈ ಮತ್ತು ಸಮಾನ ಮನಸ್ಕರು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಭಾಗವಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವರ್ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾದ ಕುಕ್ಕೆ ಕ್ಷೇತ್ರದ ಅಧ್ಯಕ್ಷ ಸ್ಥಾನವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಯತೀಶ್ ಅರ್ವರ್ ಕಿಡಿಕಾರಿದರು.


ಧಾರ್ಮಿಕ ಕ್ಷೇತ್ರದ ಅಧ್ಯಕ್ಷರಾಗಿ ಕ್ಷೇತ್ರದ ಅಭಿವೃದ್ಧಿ, ಭಕ್ತರ ಮೂಲಭೂತ ಸೌಕರ್ಯಗಳು, ದೇವಸ್ಥಾನದ ಆಡಳಿತದಲ್ಲಿನ ಲೋಪದೋಷಗಳನ್ನು ಸರಿಪಡಿಸುವತ್ತ ಗಮನ ಹರಿಸಬೇಕಾದವರು ಇಂತಹ ಪ್ರತಿಭಟನೆಯಲ್ಲಿ ಭಾಗವಹಿಸಿ ಏನು ಸಂದೇಶ ಸಾರುತ್ತಿದ್ದಾರೆ ಎಂದು ಪ್ರಶ್ನಿಸಿದರು.


ಸುಬ್ರಹ್ಮಣ್ಯದಲ್ಲಿ ಭಕ್ತರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇವುಗಳನ್ನು ಬಿಟ್ಟು ರಾಜಕೀಯ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳುವುದೇ ಅಧ್ಯಕ್ಷರ ಆದ್ಯತೆಯೇ ಎಂದು ಅವರು ಕೇಳಿದರು.ಅಧ್ಯಕ್ಷ ಸ್ಥಾನವೆಂದರೆ ರಾಜಕೀಯ ವೇದಿಕೆಯಲ್ಲ, ಅದು ಕ್ಷೇತ್ರದ ಸೇವೆಗಾಗಿ ಸಿಕ್ಕ ಜವಾಬ್ದಾರಿ.


ಈ ಸ್ಥಾನದಲ್ಲಿರುವಾಗ ಸಾರ್ವಜನಿಕವಾಗಿ ನಡೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಕ್ಷೇತ್ರದ ಘನತೆಗೆ ಸಂಬಂಧಿಸಿದ್ದು ಎಂಬ ಅರಿವು ಇರಬೇಕು ಎಂದು ಯತೀಶ್ ಅರ್ವರ್ ತಾಕೀತು ಮಾಡಿದರು.ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕು, ಕ್ಷೇತ್ರವನ್ನು ರಾಜಕೀಯ ವೇದಿಕೆ ಮಾಡಬಾರದು ಎಂದು ಅವರು ಒತ್ತಾಯಿಸಿದರು.














































