ರೋಟ ವೈರಸ್ ನಿಂದ ಉಂಟಾಗುವ ಗಂಭೀರ ಅತಿಸಾರ ಮತ್ತು ವಾಂತಿಯ ಸೋಂಕಿನಿಂದ ಶಿಶು ಗಳನ್ನು ರಕ್ಷಿಸಲು ಸರಕಾರಿ ಆರೋಗ್ಯ ಕೇಂದ್ರ ಗಳಲ್ಲಿ ನೀಡಲಾಗುತ್ತಿರುವ ರೋಟಾ ಲಸಿಕೆ ಎರಡು ತಿಂಗಳುಗಳಿಂದ ಪೂರೈಕೆ ಆಗಿಲ್ಲ, ಹೀಗಾಗಿ ಅರ್ಹ ರೋಟಾ ಲಸಿಕೆಯಿಂದ ವಂಚಿತವಾಗುತ್ತಿವೆ.ಉದಯವಾಣಿ ವಿಶೇಷ ವರದಿಪುತ್ತೂರು ಸಹಿತ ದ.ಕ. ಜಿಲ್ಲೆಯ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಟಾ ಲಸಿಕೆಗೆಂದು ಮಗುವನ್ನು ಕರೆದುಕೊಂಡು ಹೋಗಿ ಲಸಿಕೆ ಸಿಗದೆ
ವಾಪಸಾಗುತ್ತಿರುವ ದೃಶ್ಯ ಕಂಡು ಬರುತ್ತಿದ್ದು ಲಭ್ಯ ಮಾಹಿತಿ ಪ್ರಕಾರ ಎರಡು ತಿಂಗಳಿನಿಂದ ರಾಜ್ಯದಲ್ಲೇ ರೋಟಾ ಲಸಿಕೆಯ ಕೊರತೆ ಉಂಟಾಗಿದೆ.
ರೋಟಾ ವೈರಸ್ ಸೋಂಕಿನ ಲಕ್ಷಣ
ವೈರಸ್ ಸೋಂಕು ದೇಹ ಸೇರಿದ ಅನಂತರ 1ರಿಂದ 3 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಬಹುದು. ಭೇದಿ ಜತೆಗೆ ಜ್ವರ ಮತ್ತು ವಾಂತಿ, ಒಮ್ಮೊಮ್ಮೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಭೇದಿ ಮತ್ತು ಇತರ ಲಕ್ಷಣಗಳು ಅಂದಾಜು 3ರಿಂದ 7 ದಿನಗಳವರೆಗೆ ಇರುತ್ತವೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದಲ್ಲಿ ಶರೀರದಲ್ಲಿ ನೀರು ಮತ್ತು ಲವಣಾಂಶದ ಕೊರತೆ ಉಂಟಾಗಿ ಮೃತಪಡುವ ಸಂಭವವೂ ಇದೆ.ಇದು ಕಲುಷಿತ ನೀರು, ಆಹಾರ ಮತ್ತು ಕೊಳೆ ಕೈಯಿಂದ ಹರಡುತ್ತದೆ. ಸ್ವಚ್ಛ ನೀರು, ಆಹಾರ ಸೇವಿಸುವುದು, ಮಗು ಹುಟ್ಟಿದ ಮೊದಲ 6 ತಿಂಗಳು ಕೇವಲ ಎದೆ ಹಾಲುಣಿಸುವುದು, ಎ ವಿಟಮಿನ್ ಇರುವ ಪೂರಕ ಆಹಾರಗಳನ್ನು ನೀಡುವ ಮೂಲಕ ರೋಗ ತಡೆಗಟ್ಟಬಹುದಾಗಿದೆ.
ಏನಿದು ಲಸಿಕೆ?
ಅತಿಸಾರ ಮತ್ತು ವಾಂತಿಯ ಸೋಂಕಿನಿಂದ ಶಿಶುಗಳನ್ನು ರಕ್ಷಿಸಲು ನೀಡುವ ಲಸಿಕೆ, ಶಿಶುವಿಗೆ 1.5 ತಿಂಗಳು , 2.5 ತಿಂಗಳು , 3.5 ತಿಂಗಳು ತುಂಬಿದಾಗ ನೀಡಲಾಗುತ್ತದೆ. ಹೀಗೆ ಒಟ್ಟು 3 ಹಂತದಲ್ಲಿ ಲಸಿಕೆ ನೀಡಿದಾಗ ಮಗುವಿನ ದೇಹದಲ್ಲಿ ರೋಟಾ ವೈರಸ್ ವಿರುದ್ದ ಪ್ರತಿರೋಧಕ ಶಕ್ತಿ ಬೆಳೆಯುತ್ತದೆ. ಈ ಸೋಂಕು ಮಕ್ಕಳಲ್ಲಿ ತೀವ್ರವಾದ ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ, ಇದರಿಂದ ತೀವ್ರ ನಿರ್ಜಲೀಕರಣ ಉಂಟಾಗಬಹುದು. ಈ ಲಸಿಕೆಯಿಂದ ಸೋಂಕು ತಡೆಯಲು ಸಹಾಯವಾಗುತ್ತದೆ. ಇದು ಬಾಯಿಯಮೂಲಕ ನೀಡಲಾಗುವ ಲಸಿಕೆ.
ರೋಟಾ ಲಸಿಕೆಯಲ್ಲಿ ಸ್ವಲ್ಪ ಮಟ್ಟಿನ ಕೊರತೆ ಉಂಟಾ ಗಿರುವುದು ನಿಜ ಈ ಬಗ್ಗೆ ರಾಜ್ಯದ ಗಮನಕ್ಕೆ ತಂದಿದ್ದು, ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
– ಡಾ| ಎಚ್.ಆರ್. ತಿಮ್ಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ
ಉಡುಪಿ ಜಿಲ್ಲೆಯಲ್ಲಿ ಪ್ರತೀ ತಿಂಗಳಿಗೆ 930ರಿಂದ 1,000 ರೋಟಾ ಲಸಿಕೆ ಬೇಡಿಕೆ ಇದೆ. ಈ ತಿಂಗಳು ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಲಸಿಕೆ ಬಂದಿಲ್ಲ. ಈ ಮಾಸಾಂತ್ಯದೊಳಗೆ ಬರುವ ಸಾಧ್ಯತೆಗಳಿವೆ.
– ಡಾ। ಬಸವರಾಜ್ ಹುಬ್ಬಳ್ಳಿ ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ













































