ವಿಟ್ಲ:_ ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಜನಾಂದೋಲನ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗುಡುಗಿದರು.

ಕಳೆದ ಮೂರುವರೆ ವರ್ಷದಲ್ಲಿ ಕಾಂಗ್ರೆಸ್ ಪಾರ್ಟಿಯ ಆಡಳಿತ ವೈಖರಿ ಹೇಗಿದೆ ಅಂದರೆ, ಒಂದು ಕಡೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಿಕ್ಕೆ ರಾಜ್ಯದಲ್ಲಿ ಬಿಡುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳು ಬಂದರೆ ಅದಕ್ಕೆ ಹಣ್ಣು ಕಾಯಿ ಹೊಡಿಲಿಕ್ಕೆ ಮೊದಲು ತಯಾರು ಇವರು ಎಂದು ಕಿಡಿಕಾರಿದರು.


ಪುತ್ತೂರಿನಲ್ಲಿ ಕೂಡ ಇವತ್ತು ಪರಿಸ್ಥಿತಿ ಯಾವ ರೀತಿ ನಿರ್ಮಾಣ ಆಗಿದೆ ಅಂದರೆ, ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಯೋಜನೆಯನ್ನು ಕೂಡ ಶಾಸಕರು ತನ್ನದೇ ಯೋಜನೆ ಅಂತ ಎಷ್ಟು ಫ್ಲೆಕ್ಸ್ ಹಾಕಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೃತ್ ಯೋಜನೆ ಮುಖಾಂತರ ಪುತ್ತೂರಿಗೆ ಮೂರು ಕೋಟಿ ನಲವತ್ತೈದು ಲಕ್ಷ ರೂಪಾಯಿ ಯೋಜನೆ ಬಂದಿದ್ದರೆ, ನಿರ್ಮಲ ಗುಡ್ಡೆಗೆ ಎಂಬತ್ತೈದು ಲಕ್ಷ ರೂಪಾಯಿ ಯೋಜನೆ ಬಂದಿದ್ದರೆ, ಶಾಸಕರು ತನ್ನ ಕಿಸೆಯಿಂದ ಹಾಕಿದ ರೀತಿಯಲ್ಲಿ ಬಂದು ಉದ್ಘಾಟನೆ ಮಾಡುತ್ತಾರೆ ಎಂದು ಆರೋಪಿಸಿದರು.


ಒಂದು ಕಡೆಯಿಂದ ಹೇಳುತ್ತಾರೆ ಅಭಿವೃದ್ಧಿಯಲ್ಲಿ ರಾಜಕಾರಣ ಇಲ್ಲ ಎಂದು, ಆದರೆ ಕನಿಷ್ಠ ಸೌಜನ್ಯತೆ ಇಲ್ಲ. ಕೇಂದ್ರ ಸರ್ಕಾರದ ಯೋಜನೆಗೆ ಸಂಸದರನ್ನು ಕರೆಯಬೇಕು, ಜನಪ್ರತಿನಿಧಿಗಳನ್ನು ಕರೆಯಬೇಕು, ಒಂದು ಕಾಲ್ ಫಾಲೋ ಮಾಡಬೇಕು ಅನ್ನುವುದೇ ಇಲ್ಲ. ತಾನು ನಡೆದದ್ದೇ ದಾರಿ, ಸುಳ್ಳು ಹೇಳಿಕೊಂಡು ಏನು ಬೇಕಾದರೂ ಮಾತನಾಡಿಕೊಂಡು ನಡೆಯಬಹುದು ಅನ್ನುವ ಭ್ರಮೆಯಲ್ಲಿ ಇದ್ದಾರೆ ಎಂದರು.


ಈ ಸಭೆಯ ಮುಖಾಂತರ ಜಿಲ್ಲಾಡಳಿತಕ್ಕೆ ಸ್ಪಷ್ಟವಾದ ಎಚ್ಚರಿಕೆಯನ್ನು ಕೊಡುತ್ತಿದ್ದೇನೆ, ಯಾವ ಯೋಜನೆಗಳು ಕೇಂದ್ರ ಸರ್ಕಾರದ್ದು ಇದೆಯೋ ಆ ಯೋಜನೆಗಳಿಗೆ ಸರಿಯಾದ ಪ್ರೋಟೋಕಾಲ್ ಫಾಲೋ ಮಾಡಬೇಕು, ಸಂಬಂಧಪಟ್ಟವರನ್ನು ಕರೆಯಬೇಕು, ಆ ಯೋಜನೆಗಳನ್ನು ಆ ಮುಖಾಂತರವೇ ಮಾತನಾಡಬೇಕು ಎಂದು ಎಚ್ಚರಿಸಿದರು.














































