ಆರ್‌ಎಸ್‌ಎಸ್ ಕೂಡ ರಾಜಕೀಯ ಸಂಘಟನೆ: ಸಚಿವ ದಿನೇಶ್ ಗುಂಡೂರಾವ್‌ ವಾಗ್ದಾಳಿ

Picture of Savistara

Savistara

Bureau Report

ಮಂಗಳೂರು: ‘ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಆರ್‌ಎಸ್‌ಎಸ್‌ ಕೂಡ ರಾಜಕೀಯ ಸಂಘಟನೆ. ಅವರು ರಾಜಕಿಯೇತರ ಸಂಘಟನೆ ಆಗಿದ್ದರೆ ಅದು ಬೇರೆ ತರಹ. ಅವರದು ಒಂದು ಕೋಮುವಾದಿ ಸಂಘಟನೆ. ಅವರ ಇತಿಹಾಸ ನಮಗೆಲ್ಲ ಗೊತ್ತಿದೆ. ಅವರ ಕಾರ್ಯಕ್ರಮಗಳ ಉದ್ದೇಶದ ಬಗ್ಗೆ ಸಹಜವಾಗಿ ಅನುಮಾನ ಬಂದೇ ಬರುತ್ತದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಕಾನೂನಿಗಿಂತ ಮೇಲೇನಿಲ್ಲ. ಅವರೂ ದೇಶದ ಕಾನೂನು ಅಡಿಯಲ್ಲೇ ಕೆಲಸ ಮಾಡಬೇಕು. ಆರ್‌ಎಸ್‌ಎಸ್ ಹಮ್ಮಿಕೊಳ್ಳುವ ಪಥಸಂಚಲನದ ಕುರಿತು ಕಾನೂನು ಸುವ್ಯವಸ್ಥೆ ನೆಲೆಯಲ್ಲೇ ಚರ್ಚೆ ನಡೆಯುತ್ತಿದೆ. ಯಾವುದೇ ಕಾರ್ಯಕ್ರಮ ಮಾಡಬೇಕಾದರೂ, ಯಾರಿಗೂ ತೊಂದರೆ ಆಗದಂತೆ, ಕಾನೂನಿನ ಚೌಕಟ್ಟಿನಲ್ಲೇ ಮಾಡಬೇಕಾಗುತ್ತದೆ. ಅದು ಆರ್‌ಎಸ್‌ಎಸ್ ಇರಬಹುದು ಅಥವಾ ಬೇರಾವುದೇ ಸಂಸ್ಥೆಯೇ ಇರಬಹುದು. ಪಿಎಫ್‌ಐ ಅನ್ನು ನಾವು ಯಾರೂ ಬೆಂಬಲಿಸಿಲ್ಲ. ಎಸ್‌ಡಿಪಿಐ ಯಾವುದಾದರೂ ಕಾರ್ಯಕ್ರಮ ಮಾಡುವುದಿದ್ದರೂ ಅನುಮತಿ ಪಡೆದೇ ಮಾಡಬೇಕು’ ಎಂದರು.’ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆ. ಎಸ್‌ಐಟಿ ತನಿಖೆಗೆ ತಡೆಯಾಜ್ಞೆ ನೀಡಿರುವುದು ನ್ಯಾಯಾಲಯದ ತೀರ್ಮಾನ. ಇದು ನನಗೂ ಆಶ್ಚರ್ಯ ಆಗಿದೆ. ನ್ಯಾಯಾಲಯವು ಎಸ್‌ಐಟಿ ತನಿಖೆಯನ್ನು ರದ್ದು ಗೊಳಿಸಿಲ್ಲ. ತಡೆಯಾಜ್ಞೆ ನೀಡಿದೆ ಅಷ್ಟೆ. ಎಸ್‌ಐಟಿ ತನಿಖೆ ಮುಂದುವರಿಸಲು ಅವಕಾಶ ನೀಡಬೇಕು ಎಂದೇ ಸರ್ಕಾರದ ವಕೀಲರು ವಾದಿಸಿದ್ದರು. ನ್ಯಾಯಾಲದ ಆದೇಶವನ್ನು ಪ್ರಶ್ನೆ ಮಾಡಲಾಗದು. ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನ ನಡೆಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಸಾಕ್ಷಿಗಳ ಆಧಾರದ ಮೇಲೆ ತನಿಖೆ ಮಾಡಬೇಕು. ಯಾರೇ ತಪ್ಪಿತಸ್ಥರಿದ್ದರೂ ಕ್ರಮವಹಿಸಬೇಕು ಎಂದು ಎಸ್‌ಐಟಿಗೆ ಸೂಚನೆ ನೀಡಿತ್ತು. ಯಾವುದೇ ಒಂದು ಮಾಹಿತಿ ಸಿಕ್ಕರೂ ಅವರು ತನಿಖೆ ಮಾಡಬಹುದು’ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ. ಅವರೇ ಮುಂದುವರಿಯಲಿದ್ದಾರೆ. ಹಾಗಾಗಿ ದಲಿತ ಮುಖ್ಯಮಂತ್ರಿ ಚರ್ಚೆ ಸದ್ಯಕ್ಕೆ ಅಗತ್ಯವಿಲ್ಲ. ಈ ಚರ್ಚೆಗೆ ಕಾರಣವೂ ಇಲ್ಲ, ಅವಕಾಶವೂ ಇಲ್ಲ ಹಾಗೂ ಪೂರಕ ಸನ್ನಿವೇಶವೂ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು’ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗಬೇಕು, ಏನಾಗಬೇಕು ಎಂದು ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯದ ಉಸ್ತುವಾರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸೇರಿ ತೀರ್ಮಾನ ಮಾಡಲಿದ್ದಾರೆ. ಆ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ’ ಎಂದರು’ಸಚಿವ ಸಂಪುಟದಿಂದ ಕೈಬಿಟ್ಟರೂ ಒಪ್ಪಿಕೊಳ್ಳುತ್ತೇನೆ. ಹಿಂದಿನ ಅವಧಿಯಲ್ಲೂ ಮೂರು ವರ್ಷ ಮಂತ್ರಿಯಾಗಿದ್ದೆ. ಆ ಬಳಿಕ, ‘ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ, ಬೇರೆಯವರನ್ನು ಸಚಿವರನ್ನಾಗಿ ಮಾಡಿ’ ಎಂದು ನಾನೇ ಹೇಳಿದ್ದೆ’ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಕಾಗೇರಿ ಅವರು ವಿಧಾನಸಭೆಯ ಸಭಾಧ್ಯಕ್ಷರಾಗಿ ಕೆಲಸ ಮಾಡಿದವರು. ಜವಾಬ್ದಾರಿಯುತ ಸ್ಥಾನದಲ್ಲಿದ್ದ ಅವರು ಆ ಸಾಂವಿಧಾನಿಕ ಪೀಠದ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಏನು ಹೇಳಬೇಕೆಂದೇ ಅರ್ಥವಾಗುತ್ತಿಲ್ಲ. ಅವರು ಆಧಾರ ಇಟ್ಟುಕೊಂಡು ಮಾತನಾಡಬೇಕಿತ್ತು. ಏನೇ ಇದ್ದರೂ ಲಿಖಿತವಾಗಿ ನೀಡಬಹುದಿತ್ತು. ಕಾಗೇರಿ ಅವರು ವಿಧಾನ ಸಭಾಧ್ಯಕ್ಷರಾಗಿದ್ದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಾವೂ ಹೇಳಬಹುದು’ ಎಂದರು.’ಶಾಸಕರ ಭವನಕ್ಕೆ ಪರಿಕರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಭರತ್ ಶೆಟ್ಟಿ ಅವರು ವಿಧಾನಸಭಾ ಅಧಿವೇಶನದಲ್ಲೇ ಈ ಬಗ್ಗೆ ಪ್ರಶ್ನೆ ಮಾಡಲಿ. ಅನೇಕ ಸದನ ಸಮಿತಿಗಳಿವೆ. ಅಲ್ಲೂ ಪ್ರಶ್ನೆ ಕೇಳಬಹುದು. ಬೀದಿಯಲ್ಲಿ ನಿಂತು ಸುಮ್ಮನೆ ಹೇಳಿದರೆ ಹೇಗೆ’ ಎಂದು ಪ್ರಶ್ನಿಸಿದರು.’ಕಾಗೇರಿ ಹಾಗೂ ಭರತ್ ಶೆಟ್ಟಿ ಸುಮ್ಮನೆ ಪ್ರಚಾರಕ್ಕಾಗಿ ವಿಧಾನಸಭಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕೀಳು ಮಟ್ಟದ ರಾಜಕಾರಣವನ್ನು ಅವರು ಮಾಡಿದ್ದಾರೆ’ ಎಂದರು.

‘ಪಕ್ಷವು ಪ್ರಣಾಳಿಕೆಯಲ್ಲಿ ಹೇಳಿದ್ದ ಮುಖ್ಯ ವಿಚಾರಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದೇವೆ. ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಕಾಂಗ್ರೆಸ್‌ನವರಿಗೆ ಮಾತ್ರ ಇಂತಹ ಪ್ರಶ್ನೆ ಕೇಳಲಾಗುತ್ತದೆ. ಬಿಜೆಪಿವರ ಪ್ರಣಾಳಿಕೆಯಲ್ಲಿ ಏನಿತ್ತು ಎಂದು ಜನರಿಗೆ ಗೊತ್ತೇ ಇರುವುದಿಲ್ಲ. ಅದರ ಬಗ್ಗೆ ಬಿಜೆಪಿಯವರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಕಾಂಗ್ರೆಸ್‌ಗೆ ಹಾಗಲ್ಲ. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಈಡೇರಿಸುವ ಹೊಣೆಗಾರಿಕೆ ನಮ್ಮ ಪಕ್ಷಕ್ಕೆಇದೆ. ಪ್ರಣಾಳಿಕೆಯ ಶೇ 100ರಷ್ಟು ಭರವಸೆಗಳನ್ನು ಜಾರಿಗೊಳಿಸುತ್ತೇವೆ ಎನ್ನುವುದಿಲ್ಲ. ಶೇ 99ರಷ್ಟು ಭರವಸೆಗಳನ್ನು ಈಡೇರಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

[t4b-ticker]
error: Content is protected !!