ಚೆನ್ನೈ: “ನಂದಿನಿ’ ಹೆಸರಿಗೆ ಸಂಬಂಧಿಸಿ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಸಲ್ಲಿಸಿದ್ದ ಅರ್ಜಿಗೆ ಮದ್ರಾಸ್ ಹೈಕೋರ್ಟಲ್ಲಿ ಜಯ ಸಿಕ್ಕಿದೆ. ನಂದಿನಿ ಎಂಬುದು ಕೆಎಂಎಫ್‌ಗೆ ಸೇರಿದ್ದು ಎಂದು ನ್ಯಾಯಪೀಠ ಆದೇಶಿಸಿದ್ದು, ಇತರರು ಈ ಹೆಸರು ಬಳಕೆ ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ.ಶಾಲಿಮಾರ್ ಅಗರಬತ್ತಿ ಕಂಪೆನಿಯೊಂದಿಗೆ ಆರಂಭವಾಗಿದ್ದ ಈ ಟ್ರೇಡ್ ಮಾರ್ಕ್ ಸಮರದಲ್ಲಿ ಕೆಎಂಎಫ್ ಗೆದ್ದಿದ್ದು, ಕಾನೂನು ಹೋರಾಟಕ್ಕೆ ಫಲ ಸಿಕ್ಕಿದೆ. ಶಾಲಿಮಾರ್ ಕಂಪೆನಿ ತನ್ನ ಅಗರಬತ್ತಿ ಮತ್ತು ಧೂಪಗಳಿಗೆ ಇಟ್ಟಿರುವ ಹೆಸರು ಕೆಎಂಎಫ್ ಅವರ “ನಂದಿನಿ’ಯನ್ನೇ ಹೋಲುವಂತಿದೆ. ಹೀಗಾಗಿ ಇದರಿಂದ ಗ್ರಾಹಕರು ದಾರಿ ತಪ್ಪುವ ಅಪಾಯವಿದೆ ಎಂದು ಕೋರ್ಟ್ ಹೇಳಿದೆ.1983ರಿಂದಲೂ ನಂದಿನಿ ಹೆಸರಿನ ಹಾಲು ಮತ್ತು ಹಾಲಿನ ಉತ್ಪನ್ನಗಳು ಕರ್ನಾಟಕ ಹಾಗೂ ಅದರ ನೆರೆಯ ರಾಜ್ಯಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ನಂದಿನಿ ಹೆಸರನ್ನು ಮತ್ಯಾವುದೇ ಸಂಸ್ಥೆ ಬಳಸಿದರೆ, ಅವುಗಳು ಮಾರಾಟ ಮಾಡುವ ಸರಕುಗಳು ಕೆಎಂಎಫ್‌ನ ಸರಕುಗಳು ಎಂದು ಜನ ಭಾವಿಸುವ ಸಾಧ್ಯತೆ ಇದೆ. ಹೀಗಾಗಿ ಇವು ಜನರನ್ನು ತಪ್ಪುದಾರಿಗೆಳೆದು, ಹೆಸರು ಬಳಸಿಕೊಂಡ ಕಂಪೆನಿಗಳಿಗೆ ಲಾಭ ತಂದುಕೊಡಬಹುದು ಎಂದು ನ್ಯಾ | ಆನಂದ್ ವೆಂಕಟೇಶನ್ ಹೇಳಿದ್ದಾರೆ.
ಈ ವೇಳೆ ಶಾಲಿಮಾರ್ ಪರ ಹಾಜರಾಗಿದ್ದ ವಕೀಲ, “ನಂದಿನಿ ಡಿಲಕ್ಸ್’ ಹೆಸರು ಬಳಸಲು ಸುಪ್ರೀಂಕೋರ್ಟ್ ಈಗಾಗಲೇ ಅನುಮತಿ ನೀಡಿರುವುದರನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಈ 2 ಪ್ರಕರಣಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ “ನಂದಿನಿ’ ಹೆಸರಿನ ಹಿಂದೆ ಅಥವಾ ಮುಂದೆ ಮತ್ಯಾವುದೇ ಹೆಸರನ್ನು ಸೇರ್ಪಡೆ ಮಾಡಲಾಗಿಲ್ಲ. ಹೀಗಾಗಿ ಇಂತಹ ಬಳಕೆಯನ್ನು ಅನುಮತಿಸಲಾಗದು ಎಂದು ಹೇಳಿದರು.
ಏನಿದು ಪ್ರಕರಣ?
ವಿನೋದ್ ಕಾಂಜಿ ಶಾ ಒಡೆತನದ ಶಾಲಿಮಾರ್ ಅಗರಬತ್ತಿ ಕಂಪೆನಿಯು ತನ್ನ ಕೆಲವು ಅಗರಬತ್ತಿ ಮತ್ತು ಧೂಪಗಳಿಗೆ “ನಂದಿನಿ’ ಎಂಬ ಹೆಸರನ್ನು ಟ್ರೇಡ್ ಮಾರ್ಕಾಗಿ ನೊಂದಾಯಿಸಲು ಮುಂದಾಗಿತ್ತು. ಈ ವೇಳೆ ಕೆಎಂಎಫ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಟ್ರೇಡ್ ಮಾರ್ಕ್ ಕಾಯ್ದೆಯ 91ನೇ ಸೆಕ್ಷನ್ ಅಡಿಯಲ್ಲಿ ಆಕ್ಷೇಪ ಸಲ್ಲಿಸಿತ್ತು. 2010ರಲ್ಲಿ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಕೆಎಂಎಫ್‌ನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೆಎಂಎಫ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.












































