ವಿಜಯಪುರ (ಅ.12): ವಿಜಯಪುರ ಜಿಲ್ಲೆಯ ಕೆಲವೆಡೆ ಮತ್ತೆ ಭೂಕಂಪನ ಅನುಭವವಾಗಿದೆ. ಶುಕ್ರವಾರ ರಾತ್ರಿ 10.01ರ ಸುಮಾರಿನಲ್ಲಿ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಭೂಕಂಪನ ಅನುಭವವಾಗಿದೆ.
ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ ಸುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದ್ದು, ವಿಜಯಪುರ ಹಾಗೂ ತಾಲೂಕಿನ ಮದಭಾವಿ ಹಾಗೂ ಬಸವನಗರ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಕಂಪನ ತೀವ್ರತೆ ಎಷ್ಟು?
2.6 ರಷ್ಟು ಭೂಕಂಪನದ ತೀವ್ರತೆಯಿದ್ದು, ಭೂಮಿಯ ಆಳದಲ್ಲಿ 10 ಕಿ.ಮೀ.ವರೆಗೂ ಕಂಪನವಿದೆ. ಕಳೆದ ಮೂರು ವರ್ಷಗಳಲ್ಲಿ ಮೇಲಿಂದ ಮೇಲೆ ಭೂಕಂಪನ, ಭಾರೀ ಸದ್ದು ಆಗುತ್ತಿದ್ದು, ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಇನ್ನು, ಕಳೆದ ತಿಂಗಳು ಸಿಂದಗಿ ಪಟ್ಟಣದಲ್ಲಿ ಸರಣಿ ರೂಪದಲ್ಲಿ ಭೂಕಂಪನ ಅನುಭವವಾಗಿತ್ತು. ಈಗ ನಗರ ಹಾಗೂ ತಾಲೂಕಿನಲ್ಲಿ ಕಂಪನದ ಅನುಭವವಾಗಿದೆ. ಕೆಎಸ್‌ಎನ್‌ಡಿಎಂಸಿ ಪೋರ್ಟಲ್‌ನಲ್ಲಿ ದಾಖಲಾಗಿದೆ. ಈ ಕುರಿತು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.














































