Thiruvananthapuram: ಬುಧವಾರ (ಅ 22) ಶಬರಿಮಲೆಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ದೇವಸ್ವಂ ಮಂಡಳಿ ಸಚಿವ ವಿ.ಎನ್. ವಾಸವನ್ ತೋರಿರುವ ವರ್ತನೆಯನ್ನು ಬಿಜೆಪಿ (BJP) ಕೇರಳ ಪ್ರಧಾನ ಕಾರ್ಯದರ್ಶಿ ಅನೂಪ್ ಆಂಟನಿ ಜೋಸೆಫ್ ಖಂಡಿಸಿದ್ದಾರೆ.ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೋಸೆಫ್, ರಾಷ್ಟ್ರಪತಿಗಳು ಸೇರಿದಂತೆ ಅನೇಕರು ಅಯ್ಯಪ್ಪ ಸ್ವಾಮಿಯ ಮುಂದೆ ಕೈಜೋಡಿಸಿ ನಿಂತಿದ್ದರೆ, ಸಚಿವ ವಾಸವನ್ ಅವರ ಹಿಂದೆಯೇ ಯಾವುದೇ ರೀತಿಯ, ಗೌರವ ಭಕ್ತಿ ತೋರ್ಪಡಿಸದೆ ಹಾಗೆಯೇ ನಿಂತಿದ್ದಾರೆ ಎಂದರು.
ಯಾವುದೇ ವ್ಯಕ್ತಿ ನಾಸ್ತಿಕರಾಗುವುದು ಅವರ ವೈಯಕ್ತಿಕ ಆಯ್ಕೆ, ಯಾರೂ ಅದಕ್ಕೆ ಯಾರದ್ದೂ ಆಕ್ಷೇಪ ಇಲ್ಲ, ಆದರೆ, ನೀವು ಅಯ್ಯಪ್ಪನನ್ನು ನಂಬದಿದ್ದರೆ, ಅವನ ದೇವಾಲಯದ ಒಳಗೆ ಅಥವಾ ಲಕ್ಷಾಂತರ ಜನರ ನಂಬಿಕೆ ಇಡುವ ಸ್ಥಳದಲ್ಲಿ ನಿಮಗೆ ಏನು ಕೆಲಸ ಎಂದು ಪ್ರಶ್ನಿಸಿದರು. ಸಚಿವರು ದೇವಾಲಯವನ್ನು ಲೂಟಿ ಮಾಡಲು ಮತ್ತೊಂದು ಖಜಾನೆಯಾಗಿ ಮಾರ್ಪಾಡಿಸಿಕೊಂಡಿದ್ದು, ಅವರು ಸ್ಥಾನದಿಂದ ಕೆಳಗಿಳಿಯುವುದು ಉತ್ತಮ ಎಂದರು. ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಸಚಿವ ವಾಸವನ್ ರಾಜೀನಾಮೆ ಕೇಳುತ್ತಿದೆ.ದೌಪದಿ ಮುರ್ಮು ಶಬರಿಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದು, ಅವರ ಭೇಟಿಯ ಸಮಯದಲ್ಲಿ ಸಂಪ್ರದಾಯಬದ್ಧವಾಗಿ ಇರುಮುಡಿ ಹೊತ್ತು, ಪವಿತ್ರ ಹದಿನೆಂಟು ಮೆಟ್ಟಿಲು ಹತ್ತಿ ಅಯ್ಯಪ್ಪ ಸ್ವಾಮಿ ಮತ್ತು ಹತ್ತಿರದ ಇತರ ದೇವಾಲಯಗಳಲ್ಲಿ ದರ್ಶನ ಪಡೆದರು. ಮುರ್ಮು ಅವರ ಭೇಟಿಯನ್ನು ಟೀಕಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಡಿವೈಎಸ್ಪಿ ಶ್ರೇಣಿಯ ಅಧಿಕಾರಿಯಿಂದ ಪಾಲಕ್ಕಾಡ್ ಜಿಲ್ಲಾ ಪೊಲೀಸ್ ಮುಖ್ಯಸ್ಥರು ವಿವರಣೆ ಕೇಳಿದ್ದಾರೆ ಎಂದು ವರದಿಯಾಗಿದೆ.
ರೈಲಿನಲ್ಲಿ ಪ್ರಯಾಣಿಸುವಾಗ ಫಾರ್ವಡ್್ರ ಮಾಡಿದ ಸಂದೇಶವನ್ನು ಸ್ವೀಕರಿಸಿದ ನಂತರ ಅಧಿಕಾರಿ ಅಜಾಗರೂಕತೆಯಿಂದ ಸ್ಟೇಟಸ್ ಹಾಕಿದ್ದು, ಜನರು ಅವರನ್ನು ಪ್ರಶ್ನಿಸಿದಾಗ ಅವರು ತಪ್ಪನ್ನು ಅರಿತುಕೊಂಡರು ಮತ್ತು ತಕ್ಷಣವೇ ಸ್ಟೇಟಸ್ ಅನ್ನು ತೆಗೆದುಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.













































